ನವದೆಹಲಿ: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆಎಸ್ಡಿಎಲ್) ಬಹುಕೋಟಿ ಲಂಚ ಹಗರಣದಲ್ಲಿ ಬಿಜೆಪಿ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ‘ಕ್ಲೀನ್ಚಿಟ್’ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್ ಇದು ಅಸ್ವಾಭಾವಿಕ’ ಭಷ್ಟರಿಗೆ ತಪ್ಪು ಸಂದೇಶ ರವಾಸಿಸಲಿದೆ ಎಂದು ಕಿಡಿಕಾರಿದೆ.
ಹೈಕೋರ್ಟ್ ಆದೇಶ ಪ್ರಶ್ನಿಸಿ ಕರ್ನಾಟಕ ಲೋಕಾಯುಕ್ತ ಸಲ್ಲಿಸಿರುವ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಅಹ್ಸನುದ್ದೀನ್ ಅಮಾನುಲ್ಲಾ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ನಡೆಸಿತು.
ವಿಚಾರಣೆ ವೇಳೆ ಹೈಕೋರ್ಟ್ನ ಕ್ರಮವನ್ನು ತರಾಟೆಗೆ ತೆಗೆದುಕೊಂಡ ನ್ಯಾಯಪೀಠ, “ಇಂತಹ ಗಂಭೀರ ಭ್ರಷ್ಟಾಚಾರದ ಪ್ರಕರಣಗಳಲ್ಲಿ ಚಾರ್ಜ್ಶೀಟ್ ರದ್ದುಪಡಿಸುವುದು ಅಪಾಯಕಾರಿ. ಈ ರೀತಿಯ ನಿರ್ಧಾರಗಳು ಭವಿಷ್ಯದಲ್ಲಿ ಲಂಚ ಪಡೆಯುವ ಭ್ರಷ್ಟರಿಗೆ ರಕ್ಷಣೆ ನೀಡುವಂತಾಗುತ್ತದೆ ಹಾಗೂ ಕಾನೂನು ವ್ಯವಸ್ಥೆಗೆ ಕೆಟ್ಟ ನಿದರ್ಶನವಾಗುತ್ತದೆ” ಎಂದು ತೀವ್ರ ಕಳವಳ ವ್ಯಕ್ತಪಡಿಸಿತು.
ಏನಿದು ಪ್ರಕರಣ:
ಬೆಂಗಳೂರಿನ ‘ಕೆಮಿಕಲ್ಸ್ ಕಾರ್ಪೊರೇಷನ್’ ಪಾಲುದಾರ ಸಂಸ್ಥೆಯ ಮಾಲೀಕರಾದ ಶ್ರೇಯಸ್ ಕಶ್ಯಪ್ ಎಂಬುವವರು ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ಈ ಭ್ರಷ್ಟಾಚಾರ ಜಾಲವನ್ನು ಬಯಲಿಗೆಳೆದಿದ್ದರು. 2023ರ ಜನವರಿಯಲ್ಲಿ ಕೆಎಸ್ಡಿಎಲ್ಗೆ ರಾಸಾಯನಿಕ ತೈಲ ಪೂರೈಸುವ ಟೆಂಡರ್ ಪ್ರಕ್ರಿಯೆಯಲ್ಲಿ ಕಶ್ಯಪ್ ಯಶಸ್ವಿಯಾಗಿದ್ದರು. ಆದರೆ, ಸರಬರಾಜು ಆದೇಶ (ವರ್ಕ್ ಆರ್ಡರ್) ನೀಡಲು ಹಾಗೂ ಬಿಲ್ ಮೊತ್ತ ಬಿಡುಗಡೆ ಮಾಡಲು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಅವರ ಪುತ್ರ ಪ್ರಶಾಂತ್ ಬರೋಬ್ಬರಿ 81 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಕಶ್ಯಪ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ದೂರಿನ ಅನ್ವಯ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು, ಕಚೇರಿಯಲ್ಲಿ ಮುಂಗಡವಾಗಿ 40 ಲಕ್ಷ ರೂಪಾಯಿ ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ಪ್ರಶಾಂತ್ ಮಾಡಾಳ್ ಅವರನ್ನು ರೆಡ್ ಹ್ಯಾಂಡ್ ಆಗಿ ಬಲೆಗೆ ಕೆಡವಿದ್ದರು. ರಾಜ್ಯ ಲೆಕ್ಕಪತ್ರ ಇಲಾಖೆಯ ಜಂಟಿ ನಿಯಂತ್ರಕರಾಗಿದ್ದ ಪ್ರಶಾಂತ್, ಬೆಂಗಳೂರು ಜಲಮಂಡಳಿಯಲ್ಲಿ (ಬಿಡಬ್ಲ್ಯೂಎಸ್ಎಸ್ಬಿ) ಮುಖ್ಯ ಲೆಕ್ಕಾಧಿಕಾರಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದರು. ಲಂಚ ಸ್ವೀಕಾರಕ್ಕೆ ನೆರವಾದ ಆರೋಪದಡಿ ಪ್ರಶಾಂತ್ ಜತೆಗೆ ಇತರ ನಾಲ್ವರನ್ನೂ ಪೊಲೀಸರು ಬಂಧಿಸಿದ್ದರು.



