Monday, September 21, 2026
Google search engine
Homeದೇಶರಾಮಮಂದಿರದಲ್ಲಿ 105 ಬಾರಿ ಕಳ್ಳತನ: ಸಿಸಿಟಿವಿಯಲ್ಲಿ ಪತ್ತೆ

ರಾಮಮಂದಿರದಲ್ಲಿ 105 ಬಾರಿ ಕಳ್ಳತನ: ಸಿಸಿಟಿವಿಯಲ್ಲಿ ಪತ್ತೆ

ನವದೆಹಲಿ: ಅಯೋಧ್ಯೆಯ ರಾಮಮಂದಿರ ದೇಣಿಗೆ ಕಳ್ಳತನ 105 ಬಾರಿ ಆಗಿರುವುದು ಸಿಸಿಟಿವಿ ದೃಶ್ಯಗಳಲ್ಲಿ ದೃಢಪಟ್ಟಿದೆ.

ರಾಮಮಂದಿರದ ಎಣಿಕೆ ಕೊಠಡಿ ಮತ್ತು ಸ್ಟ್ರಾಂಗ್ ರೂಮ್ ಭಾಗದ ಸಿಸಿಟಿವಿ ದೃಶ್ಯಗಳನ್ನು ಕೂಲಂಕಷವಾಗಿ ವಿಶ್ಲೇಷಿಸಿದಾಗ ಕನಿಷ್ಠ 105 ಬಾರಿ ಹಣ ಎಣಿಕೆ ಪ್ರಕ್ರಿಯೆ ವೇಳೆ ಸಿಬ್ಬಂದಿ ಕಾಣಿಕೆ ಹಣವನ್ನು ಕದ್ದಿದ್ದು, ಎಸ್‍ಐಟಿ ಕಾರ್ಯಾಚರಣೆ ವೇಳೆ ಆರೋಪಿಗಳಿಂದ ಇಲ್ಲಿಯವರೆಗೆ 79.85 ಲಕ್ಷ ರೂ. ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇದೇ ವೇಳೆ ಕಳವು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ಪ್ರಕರಣದಲ್ಲಿ ಭಾಗಿಯಾದ ಎಲ್ಲ ವ್ಯಕ್ತಿಗಳನ್ನು ಗುರುತಿಸಲಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠದ ಮುಂದೆ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ತನಿಖೆಯು ಬಹುತೇಕ ಪೂರ್ಣಗೊಂಡಿದ್ದು, ಸೆಪ್ಟೆಂಬರ್ 25ರೊಳಗೆ ಭ್ರಷ್ಟಾಚಾರ ತಡೆ ಕಾಯ್ದೆಯಡಿಯ ವಿಶೇಷ ನ್ಯಾಯಾಧೀಶರ ಮುಂದೆ ಚಾರ್ಜ್‌ಶೀಟ್ ಸಲ್ಲಿಸಲಾಗುವುದು ಎಂದು ಹೇಳಿದರು.

ಈ ಪ್ರಕರಣವನ್ನು ಸಾಬೀತುಪಡಿಸಲು ಎಸ್‌ಐಟಿ ಬಳಿ ಸಾಕಷ್ಟು ಪ್ರಮಾಣದ ದಾಖಲೆಗಳು ಮತ್ತು ಎಲೆಕ್ಟ್ರಾನಿಕ್ ಸಾಕ್ಷ್ಯಾಧಾರಗಳಿವೆ ಎಂದು ಮೆಹ್ತಾ ನ್ಯಾಯಾಲಯಕ್ಕೆ ತಿಳಿಸಿದರು.

ಎಸ್‌ಐಟಿ ಸುಪ್ರೀಂ ಕೋರ್ಟ್‌ಗೆ ತನ್ನ ತನಿಖೆಯ ಪ್ರಗತಿಯನ್ನು ವಿವರಿಸುವ ವರದಿಯನ್ನು ಸಲ್ಲಿಸಿತು. ನ್ಯಾಯಾಲಯದ ಆದೇಶದ ಪ್ರಕಾರ, ಆರೋಪಿಗಳನ್ನು ಗುರುತಿಸಲು ಸಿಸಿಟಿವಿ ದೃಶ್ಯಾವಳಿಗಳು ಮತ್ತು ಇತರ ಸಾಕ್ಷ್ಯಗಳನ್ನು ವಿಶ್ಲೇಷಿಸಲಾಗಿದೆ ಎಂದು ವರದಿ ತಿಳಿಸಿದೆ. ಅಲ್ಲದೆ, ಸಾಫ್ಟ್​​ವೇರ್ ಮೂಲಕ ರಸೀದಿಗಳನ್ನು ನೀಡಲಾಗುತ್ತಿದ್ದು, ಆ ವಸ್ತುಗಳನ್ನು ಎಸ್‌ಬಿಐ ಲಾಕರ್‌ಗಳಲ್ಲಿ ಸುರಕ್ಷಿತವಾಗಿ ಇರಿಸಲಾಗಿದೆ ಎಂದು ವರದಿಯಲ್ಲಿ ಬಹಿರಂಗಪಡಿಸಲಾಗಿದೆ ಎಂದು ನ್ಯಾಯಾಲಯ ದಾಖಲಿಸಿಕೊಂಡಿದೆ.

ತನಿಖೆಯು ಬಹುತೇಕ ಪೂರ್ಣಗೊಂಡಿದ್ದು, ತನಿಖೆ ಮುಕ್ತಾಯಗೊಂಡ ನಂತರ ಸೂಕ್ತ ನ್ಯಾಯಾಲಯದಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗುವುದು” ಎಂದು ಎಸ್‌ಐಟಿ ಸಲ್ಲಿಕೆಯನ್ನು ದಾಖಲಿಸಿಕೊಳ್ಳುವಾಗ ನ್ಯಾಯಾಲಯ ತಿಳಿಸಿತು. ಇದಕ್ಕೂ ಮುನ್ನ, ಸೆಪ್ಟೆಂಬರ್ 18ರಂದು, ರಾಮಮಂದಿರದ ಕಾಣಿಕೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಎಲ್ಲಾ 8 ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಸೆಪ್ಟೆಂಬರ್ 21ರವರೆಗೆ ವಿಸ್ತರಿಸಲಾಗಿತ್ತು.

ಅವಿನಾಶ್ ಶುಕ್ಲಾ, ಅನುಕಲ್ಪ್ ಮಿಶ್ರಾ, ಲವ್ ಕುಶ್ ಮಿಶ್ರಾ, ಮನೀಶ್ ಕುಮಾರ್ ಯಾದವ್, ಕರುಣೇಶ್ ಪಾಂಡೆ, ರಾಮ್ ಶಂಕರ್ ಮಿಶ್ರಾ, ಸುಭಾಷ್ ಶ್ರೀವಾಸ್ತವ ಮತ್ತು ರಮಾಶಂಕರ್ ಅಲಿಯಾಸ್ ತಿನ್ನು ಯಾದವ್ ಬಂಧಿತ ಆರೋಪಿಗಳಾಗಿದ್ದು, ಜೂನ್ 25ರಂದು ಎಫ್‌ಐಆರ್ ದಾಖಲಿಸಿ ಬಂಧಿಸಲಾಗಿತ್ತು. ಪ್ರಸ್ತುತ ಇವರೆಲ್ಲರೂ ಜೈಲಿನಲ್ಲಿದ್ದಾರೆ.

ಭದ್ರತಾ ನಿಯಮಗಳ ಉಲ್ಲಂಘನೆ

ದೇವಾಲಯದ ಟ್ರಸ್ಟ್ ಮತ್ತು ಬ್ಯಾಂಕ್ ನಿಗದಿಪಡಿಸಿದ್ದ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಪ್ರಕಾರ ಕಟ್ಟುನಿಟ್ಟಿನ ಭದ್ರತೆ ಮತ್ತು ಮೇಲ್ವಿಚಾರಣೆ ನಡೆಸದಿರುವುದೇ ಈ ಕಳವಿಗೆ ಮುಖ್ಯ ಕಾರಣ ಎಂದು ಎಸ್‍ಐಟಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.  ಕಾಣಿಕೆ ಹುಂಡಿಗಳನ್ನು ವ್ಯವಸ್ಥಿತವಾಗಿ ಟ್ರ್ಯಾಕ್ ಮಾಡದಿರುವುದು, ಎಣಿಕೆ ಕೊಠಡಿಯಲ್ಲಿ ಅಗತ್ಯ ಸಿಸಿಟಿವಿ ನಿಯಂತ್ರಣ ಮತ್ತು ಭದ್ರತಾ ಸಿಬ್ಬಂದಿಯ ನಿರ್ಲಕ್ಷ್ಯ ಈ ಕೃತ್ಯಕ್ಕೆ ದಾರಿಯಾಗಿದೆ ಎಂದು ತನಿಖಾ ವರದಿಯಲ್ಲಿ ಹೇಳಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments