ಬೆಂಗಳೂರು:ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಪ್ರಸ್ತುತ ಸುಮಾರು 8 ಸಾವಿರ ಕೋಟಿ ರೂ. ನಷ್ಟದಲ್ಲಿದ್ದು ಈಗಿರುವ ನೌಕರರಿಗೆ ಸಂಬಳ ನೀಡುವುದೇ ಕಷ್ಟಕರವಾಗಿರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಚಿವ ಭೈರತಿ ಸುರೇಶ್ ವಿಧಾನಪರಿಷತ್‌ನಲ್ಲಿ ಗುರುವಾರ ಬೇಸರ ವ್ಯಕ್ತಪಡಿಸಿದರು.
ಬರದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಹಾಲಿನ ದರ ಸೇರಿದಂತೆ ವಿವಿಧ ವಿಚಾರಗಳು ಪ್ರಸ್ತಾಪವಾಗುತ್ತಿದ್ದವೇಳೆ ಸಾರಿಗೆ ಸಂಸ್ಥೆ ಎದುರಿಸುತ್ತಿರುವ ಆರ್ಥಿಕ ಸಂಕಷ್ಟದ ಕುರಿತು ಸದನದ ಗಮನ ಸೆಳೆದ ಅವರು, ಹಾಲಿ ನೌಕರರಿಗೆ ಸಂಬಳ ಕೊಡಲು ಸಾಕಾಗುತ್ತಿಲ್ಲ. ಹೊಸಬರಿಗೆ ಎಲ್ಲಿಂದ ಕೆಲಸ ಕೊಡೋದು? ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಸಾರಿಗೆ ಸಂಸ್ಥೆಗಳ ಮೇಲೆ ನಿರಂತರವಾಗಿ ಹೆಚ್ಚುತ್ತಿರುವ ವೆಚ್ಚದ ಒತ್ತಡದ ಬಗ್ಗೆಯೂ ಪ್ರಸ್ತಾಪಿಸಿದ ಅವರು, ವಿಶೇಷವಾಗಿ ಡೀಸೆಲ್ ಬೆಲೆ ನಾಲ್ಕು ಬಾರಿ ಏರಿಕೆಯಾಗಿರುವುದು ಸಾರಿಗೆ ಸಂಸ್ಥೆಗಳ ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದರು.
ಆರ್ಥಿಕ ಸಂಕಷ್ಟದಿಂದ ಹೊರಬರಲು ಟಿಕೆಟ್ ದರ ಏರಿಕೆ ಮಾಡುವ ಕುರಿತು ಸರ್ಕಾರ ಚಿಂತನೆ ನಡೆಸಿತ್ತು. ಆದರೆ ಟಿಕೆಟ್ ದರ ಏರಿಕೆ ಮಾಡಿದರೆ ಸಾರ್ವಜನಿಕರಿಗೆ ಹೊರೆಯಾಗಲಿದೆ ಹಾಗೂ ವಿಪಕ್ಷಗಳಿಂದ ವಿರೋಧ ವ್ಯಕ್ತವಾಗಬಹುದು ಎಂಬ ಹಿನ್ನೆಲೆಯಲ್ಲಿ ಆ ಕ್ರಮವನ್ನು ಕೈಗೊಳ್ಳಲು ಸಾಧ್ಯವಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಸಾರಿಗೆ ಸಂಸ್ಥೆಯ ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕಿದೆ. ಈಗಿರುವ ನೌಕರರಿಗೆ ಸಂಬಳ ನೀಡುವುದೇ ಸವಾಲಾಗಿರುವಾಗ, ಹೊಸ ನೇಮಕಾತಿ ಮಾಡಿ ಉದ್ಯೋಗ ನೀಡುವ ಪ್ರಶ್ನೆಯೂ ಎದುರಾಗುತ್ತದೆ ಎಂದು ತಿಳಿಸಿದರು.



