ನವದೆಹಲಿ: ಬಾಲಿವುಡ್ ನಟ ಟೈಗರ್ ಶ್ರಾಫ್ ಕಾರಿನ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣವು ಹೊಸ ತಿರುವು ಪಡೆದುಕೊಂಡಿದೆ. ದೆಹಲಿ ಪೊಲೀಸರ ವಿಶೇಷ ಘಟಕವು ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರನ್ನು ಬಂಧಿಸಿದೆ.
ವಿದೇಶದಿಂದ ಕಾರ್ಯಾಚರಣೆ ನಡೆಸುತ್ತಿರುವ ಗ್ಯಾಂಗ್ಸ್ಟರ್ ಅನಿಲ್ ಪಂಡಿತ್ ಎಂಬಾತನ ಸೂಚನೆಯ ಮೇರೆಗೆ ಈ ದಾಳಿ ನಡೆದಿದೆ ಎಂದು ಹೇಳಲಾಗಿದ್ದು, ಶೂಟರ್ ಗಳಿಗೆ ಗನ್ ತಲುಪಿದ್ದ ಉತ್ತರ ಪ್ರದೇಶದ ರಾಧಾ (23) ಮತ್ತು ಬಬಿತಾ (23) ಅವರನ್ನು ಬಂಧಿಸಲಾಗಿದೆ.
ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಂಧಿತ ಶೂಟರ್ ಗಳನ್ನು ಮುಂಬೈಗೆ ಕರೆ ತಂದು ಸ್ಥಳದ ಮಹಜರು ನಡೆಸಲು ತೀರ್ಮಾನಿಸಲಾಗಿದೆ.
ಮಹಿಳೆಯರು ಗನ್ ಗಳನ್ನು ಅಮೃತಸರದಿಂದ ಮುಂಬೈಗೆ ಪಿಸ್ತೂಲ್ ಮತ್ತು ಮದ್ದುಗುಂಡುಗಳನ್ನು ತಲುಪಿಸಿದ್ದಾರೆ ಎಂದು ಶಂಕಿಸಲಾಗಿದೆ.
ಶೂಟರ್ ಗಳ ಪೈಕಿ ಒಬ್ಬನಾದ ಕುನಾಲ್ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದ. ಹರ್ಸಾನಾ ಗ್ರಾಮದ ಸ್ನೇಹಿತನೊಬ್ಬ ಅವನನ್ನು ಅನಿಲ್ ಪಂಡಿತ್ ಎಂಬಾತನಿಗೆ ಪರಿಚಯಿಸಿದ್ದ. ನಂತರ ಎನ್ಕ್ರಿಪ್ಟ್ ಮಾಡಿದ (ಸುರಕ್ಷಿತ) ಮೆಸೇಜಿಂಗ್ ಅಪ್ಲಿಕೇಶನ್ ಮೂಲಕ ಪಂಡಿತ್ನೊಂದಿಗೆ ಸಂಪರ್ಕದಲ್ಲಿದ್ದ ಎಂದು ಅಧಿಕಾರಿ ಹೇಳಿದ್ದಾರೆ.
ಕುನಾಲ್ ಮತ್ತು ಅವನ ಸಹಚರ ಸುಮಿತ್ ಅಮೃತಸರದಿಂದ ಒಂದು ಪಿಸ್ತೂಲ್ ಮತ್ತು 20 ಸುತ್ತು ಮದ್ದುಗುಂಡುಗಳನ್ನು ಖರೀದಿಸಿದ್ದರು. ಸುಮಾರು ಎರಡು ತಿಂಗಳ ಹಿಂದೆ, ಕುನಾಲ್ ರಾಧಾ ಎಂಬಾಕೆಯನ್ನು ಭೇಟಿಯಾಗಿ ಆಕೆಯೊಂದಿಗೆ ಸಂಬಂಧ ಬೆಳೆಸಿದ್ದಾನೆ. ನಂತರ ಆತ ತನ್ನ ಚಟುವಟಿಕೆಗಳ ಬಗ್ಗೆ ಆಕೆಗೆ ತಿಳಿಸಿ, ಶಸ್ತ್ರಾಸ್ತ್ರವೊಂದನ್ನು ತೆಗೆದುಕೊಂಡು ಮುಂಬೈಗೆ ಹೋಗುವಂತೆ ಆಕೆಯನ್ನು ಒಪ್ಪಿಸಿದ್ದ ಎಂದು ಅಧಿಕಾರಿ ತಿಳಿಸಿದ್ದಾರೆ.
ಅಕ್ಟೋಬರ್ 15ರಂದು, ಕುನಾಲ್ ರಾಧಾ ಮತ್ತು ಆಕೆಯ ಸಹಚರಿ ಬಬಿತಾಳನ್ನು ನವದೆಹಲಿ ರೈಲು ನಿಲ್ದಾಣದಲ್ಲಿ ಬಿಟ್ಟಿದ್ದಾನೆ. ಪಿಸ್ತೂಲ್ ಅನ್ನು ರಾಧಾಳ ಬ್ಯಾಗ್ನಲ್ಲಿ ಅಡಗಿಸಿಡಲಾಗಿತ್ತು. ಪ್ರಯಾಣದುದ್ದಕ್ಕೂ ಕುನಾಲ್ ಅವರೊಂದಿಗೆ ಎನ್ಕ್ರಿಪ್ಟ್ ಮಾಡಿದ ಮೆಸೇಜಿಂಗ್ ಆ್ಯಪ್ ಮೂಲಕ ಸಂಪರ್ಕದಲ್ಲಿದ್ದು, ಪಂಡಿತ್ ನೀಡಿದ ಸೂಚನೆಗಳನ್ನು ಅವರಿಗೆ ತಲುಪಿಸುತ್ತಿದ್ದ ಎಂದು ಅಧಿಕಾರಿ ವಿವರಿಸಿದ್ದಾರೆ. ಈ ಇಬ್ಬರು ಮಹಿಳೆಯರು ಅಕ್ಟೋಬರ್ 17ರಂದು ಮುಂಬೈ ತಲುಪಿದರು. ದಾದರ್ನಲ್ಲಿ ರೈಲಿನಿಂದ ಇಳಿದ ನಂತರ, ಅವರು ಹೋಟೆಲ್ಬೊಂದರಲ್ಲಿ ತಂಗಿದರು. ಬೆಳಗ್ಗೆ 11 ಗಂಟೆ ಸುಮಾರಿಗೆ, ಅಪ್ರಾಪ್ತ ಬಾಲಕನೊಬ್ಬ ಅವರ ಹೋಟೆಲ್ ಬಳಿ ರಾಧಾಳಿಂದ ಬ್ಯಾಗ್ ಅನ್ನು ಪಡೆದುಕೊಂಡನೆಂದು ಆರೋಪಿಸಲಾಗಿದೆ.
ಮರುದಿನ ಸಂಜೆ 7 ಗಂಟೆ ಸುಮಾರಿಗೆ, ಶ್ರಾಫ್ ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆದಿದೆ ಎಂಬ ಮಾಹಿತಿ ಸಿಕ್ಕಿತು. ದಾಳಿಕೋರರು ಮುಂಬೈನಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಪಂಡಿತ್ ಕುನಾಲ್ಗೆ ತಿಳಿಸಿ, ಅವರು ಅಲ್ಲಿಂದ ತಪ್ಪಿಸಿಕೊಳ್ಳಲು ವ್ಯವಸ್ಥೆ ಮಾಡುವಂತೆ ಹೇಳಿದ್ದಾನೆ. ಅಕ್ಟೋಬರ್ 18ರಂದು ರಾಧಾ ಮತ್ತು ಬಬಿತಾ ‘ದಾದರ್-ಹರಿದ್ವಾರ ಎಕ್ಸ್ಪ್ರೆಸ್’ ರೈಲಿನಲ್ಲಿ ಮುಂಬೈನಿಂದ ದೆಹಲಿಗೆ ಪ್ರಯಾಣ ಬೆಳೆಸಿದರು ಎಂದು ಅಧಿಕಾರಿ ತಿಳಿಸಿದ್ದಾರೆ.



