ಕೊಚ್ಚಿ: ಪತ್ರಕರ್ತೆ ಗೌರಿ ಲಂಕೇಶ್ ಹಾಗೂ ವಿಚಾರವಾದಿ ಪ್ರೊ. ಎಂ.ಎಂ. ಕಲಬುರ್ಗಿ ಹತ್ಯೆಯ ಹಿಂದೆ ಸಂಘ ಪರಿವಾರದ ಕೈವಾಡವಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.
ಕೊಚ್ಚಿಯ ಮರೀನ್ ಡ್ರೈವ್‌ನಲ್ಲಿ ನಡೆದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಅಂಗಸಂಸ್ಥೆಯಾದ ಮುಸ್ಲಿಂ ಯೂತ್ ಲೀಗ್ ರಾಜ್ಯ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಪ್ರಕರಣದ ಆರೋಪಿಗಳನ್ನು ಮುಂದಿನ ಆರು ತಿಂಗಳಲ್ಲಿ ಜೈಲಿಗೆ ಕಳುಹಿಸುವುದಾಗಿ ಭರವಸೆ ನೀಡಿದ್ದಾರೆ.
ಪತ್ರಕರ್ತೆ ಗೌರಿ ಲಂಕೇಶ್, ವಿಚಾರವಾದಿ ಪ್ರೊ. ಎಂ.ಎಂ. ಕಲಬುರ್ಗಿ ಮತ್ತು ನರೇಂದ್ರ ದಾಭೋಲ್ಕರ್ ಹತ್ಯೆಗಳ ಹಿಂದೆ ಸಂಘ ಪರಿವಾರಕ್ಕೆ ಸೇರಿದವರೇ ಇದ್ದಾರೆ. ಗಾಂಧೀಜಿಯನ್ನು ಕೊಂದವರೇ ಇವರನ್ನೂ ಕೊಂದಿದ್ದಾರೆ ಎಂದು ನೇರವಾಗಿ ಆರೋಪಿಸಿದರು.
6 ತಿಂಗಳಲ್ಲಿ ಶಿಕ್ಷೆಯ ಭರವಸೆ
ಪ್ರಸ್ತುತ ಈ ಪ್ರಕರಣಗಳ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ನಮ್ಮ ಸರ್ಕಾರ ಇದನ್ನು ಗಂಭೀರವಾಗಿ ಫಾಲೋ-ಅಪ್ ಮಾಡುತ್ತಿದೆ. ಮುಂದಿನ 6 ತಿಂಗಳಲ್ಲಿ ಇಡೀ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಇವರೆಲ್ಲರನ್ನೂ ಜೈಲಿಗೆ ಕಳುಹಿಸುತ್ತೇವೆ ಎಂದು ಅವರು ಹೇಳಿದರು.
ಸಾವರ್ಕರ್ ಹಾಗೂ ಸಂಘ ಪರಿವಾರದ ಸಿದ್ಧಾಂತಗಳು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದು ಇದೇ ವೇಳೆ ಟೀಕಿಸಿದರು. ಜೊತೆಗೆ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ ಆರ್‌ಎಸ್‌ಎಸ್‌ನ 10 ನಾಯಕರ ಹೆಸರು ಹೇಳಿ ಎಂದು ಸವಾಲು ಹಾಕಿ, ಕ್ವಿಟ್ ಇಂಡಿಯಾ ಚಳವಳಿ ಮತ್ತು ಸಂವಿಧಾನದ ವಿಚಾರದಲ್ಲಿ ಆರ್‌ಎಸ್‌ಎಸ್ ಇತಿಹಾಸವನ್ನು ಟೀಕಿಸಿದರು.
