ನವದೆಹಲಿ, ಕುಲ್ಗಾಮ್: ಕಾಶ್ಮೀರ ಕಣಿವೆಯಲ್ಲಿ ಭದ್ರತಾ ಪಡೆಗಳಿಗೆ ಬೇಕಾಗಿದ್ದ ಪ್ರಮುಖ ಉಗ್ರ ಲತೀಫ್ ಭಟ್ ನನ್ನು ಭಾರತೀಯ ಸೇನೆ ಬುಧವಾರ ಎನ್ ಕೌಂಟರ್ ನಲ್ಲಿ ಹೊಡೆದುರುಳಿಸಿದೆ.
ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಬುಧವಾರ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಲಷ್ಕರ್-ಎ-ತೊಯ್ಬಾ ಸಂಘಟನೆಯ ಉಗ್ರ ಲತೀಫ್ ಭಟ್ ಹತನಾಗಿದ್ದಾನೆ. ದಾಳಿಯಲ್ಲಿ ಮೂವರು ಸಿಆರ್ಪಿಎಫ್ ಸಿಬ್ಬಂದಿ ಗಾಯಗೊಂಡಿದ್ದರು.
ನವೆಂಬರ್ 11ರಂದು ಅಖ್ರಾನ್ ಪ್ರದೇಶದಲ್ಲಿ ಸಿಆರ್ಪಿಎಫ್ ಚೆಕ್ಪೋಸ್ಟ್ ಮೇಲೆ ನಡೆದ ದಾಳಿಯಲ್ಲಿ ಭಾಗಿಯಾಗಿದ್ದ ಉಗ್ರನ ಶವ ಹಾಗೂ ಶಸ್ತ್ರಾಸ್ತ್ರವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲತೀಫ್ ಭಟ್ನ ಸಹಚರ ಉಮರ್ ನಿಸಾರ್ ದಾರ್ ಭದ್ರತಾ ಪಡೆಗಳೊಂದಿಗಿನ ಗುಂಡಿನ ಚಕಮಕಿಯಲ್ಲಿ ಹತನಾಗಿದ್ದ. ಈತನಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿತ್ತು. ಸೋಮವಾರ ನಡೆದ ಕಾರ್ಯಾಚರಣೆಯಿಂದ ತಪ್ಪಿಸಿಕೊಂಡಿದ್ದ ಲತೀಫ್ನನ್ನು ಮತ್ತೆ ಭದ್ರತಾ ಪಡೆಗಳು ಸುತ್ತುವರಿದಿದ್ದವು.
15 ಲಕ್ಷ ರೂ ಬಹುಮಾನ ಘೋಷಿಸಲಾಗಿದ್ದ ಉಗ್ರಗಾಮಿ
ಉಗ್ರನ ಸುಳಿವು ನೀಡಿದವರಿಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು 15 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದರು. ನವೆಂಬರ್ 11ರಂದು ಕುಲ್ಗಾಮ್ನ ಅಖ್ರಾನ್ ಗ್ರಾಮದಲ್ಲಿ ಸಿಆರ್ಪಿಎಫ್ ಸಿಬ್ಬಂದಿಯ ಮೇಲೆ ನಡೆದ ದಾಳಿಯಲ್ಲಿ ಲತೀಫ್ ಭಟ್ ಭಾಗಿಯಾಗಿದ್ದಾನೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.
ಶರಣಾಗಲು ಮನವೊಲಿಸಿದರೂ ಗುಂಡಿನ ದಾಳಿ!
ಕಾರ್ಯಾಚರಣೆ ವೇಳೆ ಲತೀಫ್ ಭಟ್ ಮಸೀದಿಯೊಂದರಲ್ಲಿ ಅಡಗಿಕೊಂಡಿದ್ದ. ಭದ್ರತಾ ಪಡೆಗಳು ಶರಣಾಗುವಂತೆ ಹಲವು ಬಾರಿ ಮನವಿ ಮಾಡಿದಾಗ ಅಲ್ಲಾ ಬಳಿ ಹೋಗಲು ಸಿದ್ಧ ಎಂದು ಶರಣಾಗತಿ ಪ್ರಸ್ತಾಪ ತಿರಸ್ಕರಿಸಿದ್ದ.
