ಮಾರುಕಟ್ಟೆಯಲ್ಲಿ ಸಾರ್ವಜನಿಕರ ಎದುರೇ ಸಾಮೂಹಿಕವಾಗಿ ಥಳಿಸಿ ವ್ಯಕ್ತಿಯೊಬ್ಬನ ಸಾವಿಗೆ ಕಾರಣವಾಗಿದ್ದ 6 ಪೊಲೀಸರಿಗೆ ಜೀವವಾಧಿ ಶಿಕ್ಷೆ ವಿಧಿಸಲಾಗಿದೆ.
ಅಸ್ಸಾಂನ ಟಿನ್ಸುಕಿಯಾ ಜಿಲ್ಲೆಯ ಸೆಷನ್ಸ್ ನ್ಯಾಯಾಲಯ ನ್ಯಾಯಾಧೀಶ ದೀಪಾಂಕರ್ ಬೋರಾ ಪಿನಾಲ್ ಕೋಡ್ 302ರ ಪ್ರಕಾರ 11 ವರ್ಷಗಳ ಸುದೀರ್ಘ ವಿಚಾರಣೆ ನಂತರ 6 ಪೊಲೀಸರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.
2013 ಅಕ್ಟೋಬರ್ 7ರಂದು ಟಿನ್ಸುಕಿಯಾ ಜಿಲ್ಲೆಯ ಸಾದಿಯಾ ಗ್ರಾಮದ ಅಂಬಿಕಾಪುರ್ ಮಾರುಕಟ್ಟೆಯಲ್ಲಿ ಅಜಿತ್ ಸೋನೋವಾಲ್ ಅವರನ್ನು 6 ಪೊಲೀಸರು ಹಲ್ಲೆ ನಡೆಸಿದ್ದರು. ತೀವ್ರವಾಗಿ ಗಾಯಗೊಂಡ ಅಜಿತ್ ನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದ.
ಅಜಿತ್ ತಂದೆ ಸಾದಿಯಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಎಫ್ ಐಆರ್ ದಾಖಲಿಸಿದ್ದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸುದೀರ್ಘ ವಿಚಾರಣೆ ನಂತರ ಬುಧವಾರ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಲಾಗಿದೆ.