ಪೊಲೀಸ್ ಶ್ವಾನ ಪಡೆಯ ತುಂಗಾ-2 ಭಾರೀ ಮಳೆಯ ನಡುವೆಯೂ 8 ಕಿ.ಮೀ. ದೂರ ಓಡಿ ಮಹಿಳೆಯನ್ನು ರಕ್ಷಿಸಿದ್ದೂ ಅಲ್ಲದೇ ಕೊಲೆಗಾರನನ್ನು ಹಿಡಿದುಕೊಟ್ಟಿದೆ. ಈ ಮೂಲಕ ದಾವಣಗೆರೆಯ ಶ್ವಾನ ಪಡೆಯ ತುಂಗಾ-2 ದೇಶಾದ್ಯಂತ ಭಾರೀ ಸುದ್ದಿ ಮಾಡುತ್ತಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಗ್ರಾಮದಲ್ಲಿ ಈ ರೋಚಕ ಘಟನೆ ನಡೆದಿದ್ದು, ಕೇವಲ 6 ಗಂಟೆಯಲ್ಲಿ ಕೊಲೆಗಾರನನ್ನು ಪತ್ತೆಹಚ್ಚಿದ ತುಂಗಾ-2 ಶ‍್ವಾನ ಮಹಿಳೆಯನ್ನು ಕೂದಲೆಳೆ ಅಂತರದಿಂದ ಪಾರು ಮಾಡಿದೆ.
ಗುರುವಾರ ರಾತ್ರಿ 9 ಗಂಟೆಗೆ ಸಂತೆಬೆನ್ನೂರು ಗ್ರಾಮದ ಬಡಾ ರಸ್ತೆಯ ಪೆಟ್ರೋಲ್ ಬಂಕ್ ಬಳಿ ಶವ ಕಂಡ ಗಸ್ತು ಪಡೆ ಪೊಲೀಸರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಜೊತೆಗೆ ತುಂಗಾ-2 ಶ್ವಾನವನ್ನು ಕರೆತಂದಿದ್ದರು. ಕೊಲೆಗಾರನ ಸುಳಿವು ಆಧರಿಸಿ ಹೊರಟ ತುಂಗಾ-2 ಭಾರೀ ಮಳೆಯ ನಡುವೆಯೂ ಸುಮಾರು 8 ಕಿ.ಮೀ. ದೂರ ಸಾಗಿ ಕೊಲೆಗಾರನ ಜಾಗ ಪತ್ತೆಹಚ್ಚಿದೆ.
ಸಂತೆಬೆನ್ನೂರು ಬಡಾ ರಸ್ತೆಯಲ್ಲಿ ಬಿದ್ದಿದ್ದ ವ್ಯಕ್ತಿ ಸ್ಥಳೀಯ ನಿವಾಸಿ ಸಂತೋಷ್ ಎಂದು ಗುರುತಿಸಲಾಗಿದ್ದು, ಈತನಿಗೆ ರೂಪಾ ಎಂಬಾಕೆಯೊಂದಿಗೆ ಅನೈತಿಕ ಸಂಬಂಧ ಇದೆ ಎಂಬ ಕಾರಣಕ್ಕೆ ಪತಿ ರಂಗಸ್ವಾಮಿ ಒಂದು ಕೊಲೆ ಮಾಡಿ ಮತ್ತೊಂದು ಕೊಲೆಗೆ ಯತ್ನಿಸುವಾಗ ಸಿಕ್ಕಿಬಿದ್ದಿದ್ದಾನೆ.
ಹೌದು, ಗುರುವಾರ ರಾತ್ರಿ ರಂಗಸ್ವಾಮಿ ಸಂತೆಬೆನ್ನೂರು ಪೆಟ್ರೋಲ್ ಬಂಕ್ ಬಳಿ ಅಡಿಗೆ ಸುಲಿಯುವ ಆಯುಧದಿಂದ ಸಂತೋಷ್ ನನ್ನು ಕೊಲೆ ಮಾಡಿದ್ದ. ಕೊಲೆ ಮಾಡಿ ಪತ್ನಿ ರೂಪಾಳನ್ನು ಕೊಲ್ಲಲು ಚನ್ನಾಪುರದಲ್ಲಿರುವ ತನ್ನ ಪತ್ನಿ ಬಳಿ ಹೊರಟ್ಟಿದ್ದ.
ಕೊಲೆಯಾದ ಕೆಲವೇ ನಿಮಿಷಗಳಲ್ಲಿ ಗಸ್ತು ಪೊಲೀಸರ ಕಣ್ಣಿಗೆ ರಸ್ತೆ ಬದಿ ಸತ್ತು ಬಿದ್ದಿದ್ದ ಸಂತೋಷ್ ನನ್ನು ಕಂಡು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತುಂಗಾ-2 ಜೊತೆ ಬಂದ ಪೊಲೀಸರು ಸಂತೋಷ್ ವಾಸನೆ ಹಿಡಿದು ಶ್ವಾನಕ್ಕೆ ತೆರಳಲು ಸೂಚಿಸಿದ್ದಾರೆ.
ವಾಸನೆ ಹಿಡಿದು ಹೊರಟ ತುಂಗಾ-2 ಸುಮಾರು 8 ಕಿ.ಮೀ. ದೂರದವರೆಗೂ ಭಾರೀ ಮಳೆಯ ನಡುವೆಯೂ ಓಡಿ ಚನ್ನಾಪುರದ ರಂಗಸ್ವಾಮಿ ಮನೆ ಬಾಗಿಲಿಗೆ ಬಂದು ನಿಂತಿದೆ. ಆ ಮನೆಯಲ್ಲಿದ್ದ ರೂಪಾಳ ಮೇಲೆ ಹಲ್ಲೆ ಮಾಡಿ ರಂಗಸ್ವಾಮಿ ಕೊಲೆಗೆ ಯತ್ನಿಸುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಗಾಯಗೊಂಡಿದ್ದ ರೂಪಾಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ರಂಗಸ್ವಾಮಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ದಾವಣಗೆರೆ ಜಿಲ್ಲಾ ಎಸ್ ಪಿ ಉಮಾ ಪ್ರಶಾಂತ್ ತುಂಗಾ-2 ಪರಿಶ್ರಮ ಹಾಗೂ ದಿಟ್ಟತನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.