ಬೆಂಗಳೂರು: ಮುಸ್ಲಿಂ ಸಮುದಾಯದ ಬೆಂಬಲದೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಸೂಕ್ತ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂದು ಮುಸ್ಲಿಂ ಸಂಘಟನೆಗಳ ಒಕ್ಕೂಟ ಒಕ್ಕೂರಲ ಒತ್ತಾಯ ಮಾಡಿದೆ.
ನಗರದ ಪುರಭವನಲ್ಲಿ ಶನಿವಾರ ಕರ್ನಾಟಕ ರಾಜ್ಯ ಮುಸ್ಲಿಂ ಸಂಘಟನೆಗಳ ಒಕ್ಕೂಟ ಆಯೋಜಿಸಿದ್ದ ಸಮಾವೇಶದಲ್ಲಿ ರಾಜಕೀಯ ಪ್ರಾತಿನಿಧ್ಯದ ಪ್ರಬಲ ಒತ್ತಾಯ ಕೇಳಿ ಬಂತು.
ಇದೇ ವೇಳೆ ಕಾಂಗ್ರೆಸ್ ಸರ್ಕಾರ ಹೇಳಿದ್ದೇನು? ಮಾಡಿದ್ದೇನು? ಮುಂದೇನು? ಎಂಬ ವರದಿ ಹಾಗೂ ಆಗ್ರಹಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಹಲವು ನಾಯಕರು ಕಾಂಗ್ರೆಸ್ ಪಕ್ಷ 2023ರ ಚುನಾವಣೆಯಲ್ಲಿ ಕೊಟ್ಟ ಭರವಸೆಯಂತೆ ನಡೆದುಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಲವು ವರ್ಷಗಳಿಂದಲೂ ದೇಶದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಮುಸ್ಲಿಂ ಸಮುದಾಯದ ಪಾತ್ರ ಮಹತ್ವದಾಗಿದೆ. 2023ರ ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ, ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್ ನಡೆದುಕೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ ನೀಡಿದ್ದ 10 ಪ್ರಮುಖ ಬೇಡಿಕೆಗಳನ್ನು ಪಟ್ಟಿ ಮಾಡಲಾಗಿದ್ದು, ಅವುಗಳಲ್ಲಿ ದೇಷ ಭಾಷಣ ಹಾಗೂ ಪ್ರಚೋಧನಕಾರಿ ಹೇಳಿಕೆ ಮತ್ತು ನಡವಳಿಕೆಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಅದು ಈಡೇರಿಲ್ಲ. ವಿಧಾನಮಂಡದಲ್ಲಿ ರೂಪಿಸಿದ ಕಾಯ್ದೆ ಅಂಗೀಕಾರಗೊಂಡಿಲ್ಲ, ಜಾರಿಯಾಗಿಲ್ಲ ಎಂದು ಕಿಡಿಕಾರಿದರು.
ಜಾತ್ಯತೀತ ಮತ್ತು ಪ್ರಗತಿಪರ ಸಂಘಟನೆಗಳ ಶಾಂತಿಯುತ ಪ್ರತಿಭಟನೆಗೆ ಅವಕಾಶ ನೀಡದೆ ತಾರತಮ್ಯ ಮಾಡಲಾಗುತ್ತದೆ ಎಂದು ದೂರಲಾಗಿದೆ.
2022ರಿಂದ 2025 ನಡುವೆ 270 ದ್ವೇಷ ಭಾಷಣ ಪ್ರಕರಣಗಳು ದಾಖಲಾಗಿವೆ. ಇವುಗಳ ತನಿಖೆ ಹಾಗೂ ಅಭಿಯೋಜನೆ ದುರ್ಬಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಿಜಾಬ್ ವಿವಾದದಿಂದ ಮುಸ್ಲಿಂ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದರು. ಬಿಜೆಪಿ ಸರ್ಕಾರ ಹೊರಡಿಸಿದ್ದ 2022ರ ಆದೇಶವನ್ನು ರದ್ದುಗೊಳಿಸುವುದಾಗಿ ಕಾಂಗ್ರೆಸ್ ಹೇಳಿತ್ತು. ಆದರೆ ಮೊನ್ನೆಯಷ್ಟೇ ಆದೇಶ ಹೊರಡಿಸಲಾಗಿದೆ. ಅದಕ್ಕಾಗಿ 3 ವರ್ಷ ಸಮಯ ತೆಗೆದುಕೊಂಡಿದ್ದು ಪ್ರಶ್ನಾರ್ಹವಾಗಿದೆ ಎಂದಿದ್ದಾರೆ.
ಗೋರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಕೃತ್ಯಗಳು, ಆನೈತಿಕ ಪೊಲೀಸ್ ಗಿರಿ, ಆರ್ಥಿಕ ಬಹಿಷ್ಠಾರಗಳ ವಿರುದ್ಧ ರಾಜ್ಯ ಸರ್ಕಾರ ಮೌನಾಚರಿಸುತ್ತಿದೆ. ಹಿಂದಿನ ಸರ್ಕಾರ ರೂಪಿಸಿದ್ದ ರೈತ ವಿರೋಧಿ ಗೋ ರಕ್ಷಣೆ ಕಾಯ್ದೆಯನ್ನು ಹಿಂಪಡೆಯುವುದಾಗಿ ಕಾಂಗ್ರೆಸ್ ಹೇಳಿತ್ತು. ಆದರೆ ಅದುಈವರೆಗೂ ಸಾಧ್ಯವಾಗಿಲ್ಲ. ವಿವಾದಿತ ಕಾಯ್ದೆಯಿಂದ ಶೇ. 60ರಷ್ಟು ರೈತರಿಗೆ ತೊಂದರೆಯಾಗಿದೆ ಎಂದಿದ್ದಾರೆ.
ಮತಾಂತರ ನಿಷೇಧ ಕಾಯ್ದೆಯಿಂದ ಅಂತರ್ ಧರ್ಮೀಯ ವಿವಾಹಗಳಿಗೆ ಬೆದರಿಕೆಯೊಡ್ಡಲಾಗುತ್ತಿದೆ. ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯಗಳನ್ನು ಆತಂಕದಲ್ಲಿಡುವ ಹುನ್ನಾರಗಳಾಗುತ್ತಿವೆ. ಇದನ್ನು ಹಿಂಪಡೆಯುವುದಾಗಿ ಕಾಂಗ್ರೆಸ್ ಹೇಳಿತ್ತು ಎಂದು ವಿವರಿಸಲಾಗಿದೆ.
ಮುಸ್ಲಿಮರಿಗೆ ಒಬಿಸಿ 2ಬಿ ಅಡಿ ನೀಡಲಾಗುತ್ತಿದ್ದ ಶೇ. 4ರಷ್ಟು ಮೀಸಲಾತಿಯನ್ನು ಹಿಂದಿನ ಬಿಜೆಪಿ ಸರ್ಕಾರ ರದ್ದು ಮಾಡಿತ್ತು. ಅದನ್ನು ಪುನರ್ ಸ್ಥಾಪಿಸುವಲ್ಲಿ ಸುಪ್ರೀಂಕೋರ್ಟ್ ವಿಚಾರಣೆಯ ವೇಳೆ ಕಾಂಗ್ರೆಸ್ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ ಎಂದು ಆಕ್ಷೇಪಿಸಲಾಗುತ್ತಿದೆ.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ 10 ಸಾವಿರ ಕೋಟಿ ರೂ.ಗಳ ಅನುದಾನವನ್ನು ನೀಡಬೇಕು. ಪ್ರಸಕ್ತ ಬಜೆಟ್‌ನಲ್ಲಿ ನೀಡಿರುವ 4,762 ಕೋಟಿ ರೂ. ಯಾವುದಕ್ಕೂ ಸಾಲುವುದಿಲ್ಲ. ಒಟ್ಟು ಮೀಸಲಾತಿಯ ಪ್ರಮಾಣವನ್ನು ಶೇ. 75ಕ್ಕೆ ಹೆಚ್ಚಿಸಿ, ಹಿಂದುಳಿದ, ದಲಿತ ಹಾಗೂ ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಗೆ ಆದ್ಯತೆ ನೀಡಬೇಕು. ವಕ್ಸ್ ಅಸ್ತಿಗಳ ರಕ್ಷಣೆ, ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಒತ್ತಾಯಿಸಲಾಗಿದೆ.



