ಮದ್ಯಕ್ಕಾಗಿ ಪೀಡಿಸಿದ ಪ್ರೇಯಸಿಯನ್ನು ಪ್ರಿಯಕರ ಮಚ್ಚಿನಿಂದ ಮನ ಬಂದಂತೆ ಕೊಚ್ಚಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ವಾರ್ಡ್ ನಂಬರ್ 8ರಲ್ಲಿ ಲಿವಿಂಗಿನ್ ರಿಲೇಷನ್ ಶಿಪ್ ನಲ್ಲಿದ್ದ ರಮಿಜಾಬಿ (25) ಅವರನ್ನು ಬಾಬಾಜಾನ್ (40) ಕೊಲೆ ಮಾಡಿದ್ದಾರೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಮೂಲದ ರಮಿಜಾಬಿಗೆ ಬೇರೊಬ್ಬರ ಜೊತೆ ವಿವಾಹವಾಗಿ ಮಕ್ಕಳಿದ್ದರು. ಇತ್ತ ಬಾಬಾಜಾನ್‌ಗೂ ಮದುವೆಯಾಗಿ ಮಕ್ಕಳಿದ್ದರು. ಇಬ್ಬರೂ ಸಂಸಾರವನ್ನು ತೊರೆದು ಲೀವ್ ಇನ್ ರಿಲೇಷನ್ ಶಿಪ್ ನಲ್ಲಿದ್ದರು.
ಇಬ್ಬರು ಸಹ ಕುಡಿತದ ಚಟಕ್ಕೆ ಬಿದ್ದಿದ್ದರು. ಪದೇ ಪದೇ ಕುಡಿದು ಗಲಾಟೆ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಶುಕ್ರವಾರ ಸಂಜೆ ಸಹ ಕುಡಿದು ಗಲಾಟೆ ಮಾಡಿಕೊಂಡಿದ್ದು, ರಮಿಜಾಬಿ ತನಗೆ ಮತ್ತಷ್ಟು ಎಣ್ಣೆ ಬೇಕೆಂದು ಪೀಡಿಸಿದ್ದಳು. ಇದರಿಂದ ಸಿಟ್ಟಿಗೆದ್ದ ಬಾಬಾಜಾನ್ ಮಚ್ಚಿನಿಂದ ಮನಸ್ಸೋಇಚ್ಛೆ ಕೊಚ್ಚಿ ಕೊಂದಿದ್ದಾನೆ.
ಘಟನಾ ಸ್ಥಳಕ್ಕೆ ಗುಡಿಬಂಡೆ ಪೊಲೀಸರು ಹಾಗೂ ಎಸ್ಪಿ ಕುಶಲ್ ಚೌಕ್ಸಿ ಭೇಟಿ ನೀಡಿ, ಬಾಬಾಜಾನ್‌ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮೃತದೇಹವನ್ನ ಗುಡಿಬಂಡೆ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಿ ತನಿಖೆ ಕೈಗೊಂಡಿದ್ದಾರೆ.



