ಗಣಪತಿ ವಿಸರ್ಜನಾ ಮೆರವಣಿಗೆ ಭಕ್ತರ ಮೇಲೆ ಟ್ರಕ್ ಹರಿದ ಪರಿಣಾಮ 6 ಮಂದಿ ಮೃತಪಟ್ಟ ಘಟನೆ ಹಾಸನದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ.
ಹಾಸನ ತಾಲೂಕಿನ ಮೊಸಳೆಹೊಸಳ್ಳಿ ಗ್ರಾಮದಲ್ಲಿ ಗಣೇಶ ವಿಸರ್ಜನೆ ವೇಳೆ ಡಿಜೆ ಸೌಂಡಿಗೆ ಭಕ್ತರು ಡ್ಯಾನ್ಸ್ ಮಾಡುತ್ತಿದ್ದಾಗ ಏಕಾಏಕಿ ಟ್ರಕ್ ಹರಿದಿದೆ. ಅವಘಡದಲ್ಲಿ 20ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದಾರೆ. ಸ್ಥಳಕ್ಕೆ ಎಸ್ಪಿ ಮಹಮದ್ ಸುಜೇತಾ ದೌಡಾಯಿಸಿದ್ದಾರೆ.
ಟ್ರಕ್ ನಿಯಂತ್ರಣ ಕಳೆದುಕೊಂಡು ಏಕಾಏಕಿ ನುಗ್ಗಿ ಈ ಅನಾಹುತ ಸಂಭವಿಸಿದೆ. ಮೃತಪಟ್ಟವರೆಲ್ಲರಲ್ಲಿ ಮೊಸಳೆಹೊಸಳ್ಳಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಐವರು ಇಂಜಿನಿಯರಿಂಗ್ ವಿದ್ಯಾರ್ಥಿಗಳಾಗಿದ್ದಾರೆ.
ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪರಿಸ್ಥಿತಿ ನಿಭಾಯಿಸಲು ಪೊಲೀಸರ ಹರಸಾಹಸ ಪಡುತ್ತಿದ್ದಾರೆ. ಹಾಸನದಿಂದ ಹೊಳೆನರಸೀಪುರದ ಕಡೆಗೆ ಕಂಟೇನರ್ ವಾಹನ ಹೋಗುತ್ತಿತ್ತು. ಈ ವೇಳೆ ಬೈಕ್‌ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಮೆರವಣಿಗೆ ಹೋಗುತ್ತಿದ್ದವರ ಮೇಲೆ ವಾಹನ ನುಗ್ಗಿದೆ.
ಚಾಲಕ ಭುವನೇಶ್‌ಗೂ ಗಂಭೀರ ಗಾಯಗಳಾಗಿವೆ. ಹೊಳೆನರಸೀಪುರ ತಾಲ್ಲೂಕಿನ ಕಟ್ಟೆಬೆಳಗುಲಿಯ ಚಾಲಕ ಭುವನೇಶ್‌ನನ್ನು ಹಾಸನದ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಟ್ರಕ್ ನಿಯಂತ್ರಣ ಕಳೆದುಕೊಂಡು ಏಕಾಏಕಿ ನುಗ್ಗಿ ಈ ಅನಾಹುತ ಸಂಭವಿಸಿದೆ. ದುರಂತಕ್ಕೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸಂತಾಪ ವ್ಯಕ್ತಪಡಿಸಿದ್ದಾರೆ.



