ಬಾಲಿವುಡ್ ನ ಹಿರಿಯ ಸ್ಟಾರ್ ನಟ ನಾನಾ ಪಾಟೇಕರ್ ಹೃದಯಾಘಾತದಿಂದ ಗುರುವಾರ ಮುಂಜಾನೆ ಗೋವಾದ ತಮ್ಮ ನಿವಾಸದಲ್ಲಿ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.
ಡೋನಾ ಪೌಲಾ ನಿವಾಸದಲ್ಲಿ ಬುಧವಾರ ರಾತ್ರಿ ಹೃದಯಾಘಾತದಿಂದ ಕುಸಿದುಬಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿದ್ದು, ವೈದ್ಯರು 45 ನಿಮಿಷಗಳ ಕಾಲ ಚಿಕಿತ್ಸೆ ನೀಡಿ ಉಳಿಸಲು ಸಾಕಷ್ಟು ಪ್ರಯತ್ನ ಮಾಡಿದರೂ ಫಲ ನೀಡಲಿಲ್ಲ. ಅಂತಿಮವಾಗಿ ಗುರುವಾರ ಮುಂಜಾನೆ 5.30ಕ್ಕೆ ಅವರು ನಿಧನರಾಗಿದ್ದಾರೆ ಎಂದು ವೈದ್ಯರು ಘೋಷಿಸಿದರು.
ಮಹಾರಾಷ್ಟ್ರದಲ್ಲಿ 1951ರಲ್ಲಿ ಜನಿಸಿದ ನಾನಾ ಪಾಟೇಕರ್ 1978ರಲ್ಲಿ ಗಮನ್ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ಸಲಾಂ ಬಾಂಬೆ ಹಾಗೂ ಪರಿಂದ ಚಿತ್ರದ ಮೂಲಕ ಪ್ರಖ್ಯಾತರಾದ ನಾನಾ ಪಾಟೇಕರ್ ಪರಿಂದ ಚಿತ್ರದಲ್ಲಿ ಭೂಗತ ಲೋಕದ ದೊರೆ ಅಣ್ಣಾ ಸೇಥ್ ಪಾತ್ರಕ್ಕಾಗಿ ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿಗೆ ಪಾತ್ರರಾಗಿದ್ದರು.
ನಂತರ ನಿರ್ಮಾಪಕ, ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ ನಾನಾ ಪಾಟೇಕರ್ ಅಂಗಾರ್, ತಿರಂಗ, ಕ್ರಾಂತಿವೀರ್, ಅಗ್ನಿಸಾಕ್ಷಿ, ಖಾಮೋಷಿ, ಯಶವಂತ್, ಅಬ್ ತಕ್ ಚಪ್ಪನ್, ಅಪಹರಣ್, ವೆಲ್ ಕಮ್, ರಾಜನೀತಿ ಮುಂತಾದ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದರು.
ಅಲ್ಲದೇ ಮೂರು ವಿಭಾಗಗಳಲ್ಲಿ ಚಲನ ಚಿತ್ರ ಪ್ರಶಸ್ತಿ ಪಡೆದ ಮೊದಲ ನಟ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಶ್ರೇಷ್ಠ ಪೋಷಕ ನಟ (ಪರಿಂದ), ಶ್ರೇಷ್ಠ ನಟ (ಕ್ರಾಂತಿವೀರ್), ಅತ್ಯುತ್ತಮ ಖಳನಟ (ಅಂಗಾರ್ ಮತ್ತು ಅಪಹರಣ್) ವಿಭಾಗಗಳಲ್ಲಿ ಪ್ರಶಸ್ತಿ ಗಳಿಸಿದ್ದಾರೆ. ಅಗ್ನಿ ಸಾಕ್ಷಿ ಚಿತ್ರಕ್ಕಾಗಿ ಎರಡನೇ ಬಾರಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಗೆ ಪಾತ್ರರಾದರು.
2013ರಲ್ಲಿ ಚಲನಚಿತ್ರಗಳಲ್ಲಿ ಸಲ್ಲಿಸಿದ ಸೇವೆಗಾಗಿ ಪದ್ಮಶ್ರೀ ಪ್ರಶಸ್ತಿ ನೀಡಿ ಕೇಂದ್ರ ಸರ್ಕಾರ ಪುರಸ್ಕಾರ ನೀಡಿತ್ತು. ನಾನಾ ಪಾಟೇಕರ್ ಕಲಾವಿದರಾಗಿ ಅಲ್ಲದೇ ರೈತರು ಸಂಕಷ್ಟದಲ್ಲಿದ್ದಾಗ ಅವರಿಗೆ ನೆರವಾಗಿ ಮಾನವೀಯತೆ ಮೆರೆದಿದ್ದರು.



