ಶಿಸ್ತಿನ ದಾಳಿ ಸಂಘಟಿಸಿದ ದಕ್ಷಿಣ ಆಫ್ರಿಕಾ ತಂಡ ಟಿ-20 ವಿಶ್ವಕಪ್ ನ ಸೂಪರ್-8 ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 7 ರನ್ ಗಳ ರೋಚಕ ಜಯ ಸಾಧಿಸಿದೆ.
ಗ್ರಾಸ್ ಇಸ್ಲೆಟ್ ಮೈದಾನದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡ 6 ವಿಕೆಟ್ ಕಳೆದುಕೊಂಡು 163 ರನ್ ಪೇರಿಸಿತು. ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿದ ಇಂಗ್ಲೆಂಡ್ 6 ವಿಕೆಟ್ ಕಳೆದುಕೊಂಡು 156 ರನ್ ಗಳಿಸಲಷ್ಟೇ ಶಕ್ತವಾಯಿತು.
ಇಂಗ್ಲೆಂಡ್ 61 ರನ್ ಗೆ 4 ವಿಕೆಟ್ ಕಳೆದುಕೊಂಡು ಕಂಗಾಲಾಯಿತು. ಈ ಹಂತದಲ್ಲಿ ಹ್ಯಾರಿ ಬ್ರೂಕ್ ಮತ್ತು ಲಿಯಾಮ್ ಲಿವಿಂಗ್ ಸ್ಟೋನ್ 5ನೇ ವಿಕೆಟ್ ಗೆ 78 ರನ್ ಜೊತೆಯಾಟದಿಂದ ತಂಡವನ್ನು ಕುಸಿತದಿಂದ ಪಾರು ಮಾಡಿದರು. ಬ್ರೂಕ್ 37 ಎಸೆತಗಳಲ್ಲಿ 7 ಬೌಂಡರಿ ಸಹಿತ 53 ರನ್ ಗಳಿಸಿದರೆ, ಲಿವಿಂಗ್ ಸ್ಟೋನ್ 17 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 33 ರನ್ ಬಾರಿಸಿದರು.
ಇವರಿಬ್ಬರು ಔಟಾಗುತ್ತಿದ್ದಂತೆ ಒತ್ತಡಕ್ಕೆ ಒಳಗಾದ ಇಂಗ್ಲೆಂಡ್ ರನ್ ಗಳಿಸಲು ಪರದಾಡಿತು. ಅದರಲ್ಲೂ ಕೊನೆಯ ಎರಡೂ ಓವರ್ ಗಳಲ್ಲಿ ಒಂದೂ ಬೌಂಡರಿ, ಸಿಕ್ಸರ್ ಕೊಡದೇ ಹರಿಣಗಳು ಇಂಗ್ಲೆಂಡ್ ಗೆ ಸೋಲಿನ ರುಚಿ ತೋರಿಸಿ ಅಜೇಯ ದಾಖಲೆ ಮುಂದುವರಿಸಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ಪರ ಕ್ವಿಂಟನ್ ಡಿ ಕಾಕ್ ಮತ್ತು ರೀಜಾ ಹೆಂಡ್ರಿಕ್ಸ್ ಮೊದಲ ವಿಕೆಟ್ ಗೆ 86 ರನ್ ಜೊತೆಯಾಟದಿಂದ ಭರ್ಜರಿ ಆರಂಭ ನೀಡಿದರು. ಕ್ವಿಂಟನ್ ಡಿ ಕಾಕ್ 38 ಎಸೆತಗಳಲ್ಲಿ 4 ಬೌಂಡರಿ ಮತ್ತು 4 ಸಿಕ್ಸರ್ ಸೇರಿದ 65 ರನ್ ಸಿಡಿಸಿದರೆ, ಹೆಂಡ್ರಿಕ್ಸ್ 19 ರನ್ ಬಾರಿಸಿದರು.
ತಂಡ ಮಧ್ಯಮ ಕ್ರಮಾಂಕದಲ್ಲಿ ಕುಸಿತ ಅನುಭವಿಸಿದರೂ ಡೇವಿಡ್ ಮಿಲ್ಲರ್ 28 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 43 ರನ್ ಬಾರಿಸಿ ತಂಡವನ್ನು ಉತ್ತಮ ಸ್ಥಿತಿಗೆ ತಂದು ನಿಲ್ಲಿಸಿದರು.