ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಗೆಳತಿ ಸಾನಿಯಾ ಚಂದೂಕ್ ಅವರನ್ನು ವಿವಾಹವಾಗಲಿದ್ದು, ಎರಡೂ ಕುಟುಂಬಗಳ ಮದುವೆ ದಿನಾಂಕ ನಿಗದಿಪಡಿಸಿವೆ.
ಅರ್ಜುನ್ ತೆಂಡೂಲ್ಕರ್ ಹಾಗೂ ಸಾನಿಯಾ ಚಂದೂಕ್ ಮದುವೆ ಸಂಬಂಧ ಎರಡೂ ಕುಟುಂಬಗಳು ಮಾತುಕತೆ ಸೇರಿದಂತೆ ಸಾಂಪ್ರದಾಯಗಳನ್ನು ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
2026 ಮಾರ್ಚ್ 3ರಿಂದ 5ರವರೆಗೆ ಮದುವೆ ಸಮಾರಂಭ ಅದ್ಧೂರಿಯಾಗಿ ನಡೆಯಲಿದೆ ಎಂದು ಹೇಳಲಾಗಿದ್ದು, ಇದುವರೆಗೆ ಎರಡೂ ಕುಟುಂಬಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಎಡಗೈ ಆಲ್ ರೌಂಡರ್ ಆಗಿರುವ ಅರ್ಜುನ್ ತೆಂಡೂಲ್ಕರ್ ಮುಂಬೈ ಇಂಡಿಯನ್ಸ್ ತಂಡದಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ವಲಸೆ ಹೋಗಿದ್ದಾರೆ. ಅಲ್ಲದೇ ರಣಜಿಯಲ್ಲಿ ಮುಂಬೈ ತೊರೆದು ಗೋವಾ ಪರ ಆಡುತ್ತಿದ್ದಾರೆ.
ಭಾರತ ತಂಡಕ್ಕೆ ಮರಳಲು ಶತಪ್ರಯತ್ನ ಮಾಡುತ್ತಿರುವ ಅರ್ಜುನ್ ತೆಂಡೂಲ್ಕರ್ ಮದುವೆ ಆಗಲಿರುವ ಯುವತಿ ಸಾನಿಯಾ ಚಂದೂಕ್ ಮುಂಬೈನ ಉದ್ಯಮಿ ರವಿ ಗಾಯ್ ಅವರ ಮೊಮ್ಮಗಳಾಗಿದ್ದು, ಕಂಪನಿಯೊಂದನ್ನು ಮುನ್ನಡೆಸುತ್ತಿದ್ದಾರೆ.
2025 ಆಗಸ್ಟ್ ನಲ್ಲಿ ಅರ್ಜುನ್ ತೆಂಡೂಲ್ಕರ್ ಮತ್ತು ಸಾನಿಯಾ ಅವರ ನಿಶ್ಚಿತಾರ್ಥ ಗೌಪ್ಯವಾಗಿ ನಡೆದಿದೆ. ಇದೀಗ ಎರಡೂ ಕುಟುಂಬಗಳು ಮದುವೆ ಸಿದ್ಧತೆ ನಡೆಸಿದ್ದು, ಮದುವೆ ದಿನಾಂಕವನ್ನು ಗೌಪ್ಯವಾಗಿರಿಸಿದ್ದಾರೆ. ಇಬ್ಬರೂ ದೀರ್ಘಕಾಲದಿಂದ ಪರಿಚಯ ಹೊಂದಿದ್ದು ಆತ್ಮೀಯರಾಗಿದ್ದಾರೆ ಎಂದು ಹೇಳಲಾಗಿದೆ.
ಇತ್ತಿಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಸಚಿನ್ ತೆಂಡೂಲ್ಕರ್ ಅಭಿಮಾನಿಯೊಬ್ಬರು ನಿಮ್ಮ ಮಗನ ನಿಶ್ಚಿತಾರ್ಥ ನಿಜವಾಗಿಯೂ ಆಗಿದೆಯೇ ಎಂಬ ಪ್ರಶ್ನೆಗೆ ಹೌದು ಆಗಿದೆ. ಅವನ ಹೊಸ ಜೀವನದ ಕುರಿತು ನಾವು ಕೂಡ ಕಾತರದಿಂದ ನಿರೀಕ್ಷಿಸುತ್ತಿದ್ದೇವೆ ಎಂದು ಪ್ರತಿಕ್ರಿಯಿಸಿದ್ದರು.



