ರೈಲ್ವೆ ನಿಲ್ದಾಣದಲ್ಲಿ ಉಂಟಾದ ನೂಕುನುಗ್ಗಲಿನಲ್ಲಿ 12 ಮಂದಿ ಗಾಯಗೊಂಡಿದ್ದು, ಕೂದಲೆಳೆ ಅಂತರದಿಂದ ದೇಶದಲ್ಲಿ ಮತ್ತೊಂದು ಕಾಲ್ತುಳಿತ ದುರಂತ ತಪ್ಪಿದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ಭಾನುವಾರ ಸಂಜೆ ಬರ್ದಮನ್ ರೈಲ್ವೆ ನಿಲ್ದಾಣದಲ್ಲಿ ಭಾರೀ ಸಂಖ್ಯೆಯಲ್ಲಿ ಪ್ರಯಾಣಿಕರು ಆಗಮಿಸಿದ್ದರಿಂಧ ಈ ದುರ್ಘಟನೆ ಸಂಭವಿಸಿದೆ. ಆದರೆ ರೈಲ್ವೆ ಇಲಾಖೆ ಪ್ರಕಾರ 6 ಮಂದಿ ಗಾಯಗೊಂಡಿದ್ದು, ಇದರಲ್ಲಿ ಪುರುಷ ಮತ್ತು ಮಹಿಳೆಯರು ಸೇರಿದ್ದಾರೆ.
ದುರ್ಘಟನೆಯಲ್ಲಿ ಕನಿಷ್ಠ 12 ಮಂದಿ ಗಾಯಗೊಂಡಿದ್ದು, ಗಂಭೀರವಾಗಿ ಹಲವು ಮಂದಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಯಾಣಿಕರು ತೆರಳುವ ಮಾರ್ಗ ಕಿರುದಾಗಿದ್ದು ದುರಂತಕ್ಕೆ ಕಾರಣ ಎನ್ನಲಾಗಿದೆ.
4, 5, ಮತ್ತು 7ನೇ ಫ್ಲಾಟ್ ಫಾರ್ಮ್ ಗೆ ಒಂದೇ ಬಾರಿ ರೈಲು ಬಂದಿದ್ದರಿಂದ ಪ್ರಯಾಣಿಕರು ರೈಲು ಹತ್ತಲು ಮುಗಿಬಿದ್ದಿದ್ದಾರೆ. ಅದರಲ್ಲೂ 4 ಮತ್ತು 6ನೇ ಫ್ಲಾಟ್ ಫಾರ್ಮ್ ಒಂದೇ ಕಡೆ ಇದ್ದರಿಂದ ಮೆಟ್ಟಿಲು ಹಾಗೂ ಪಾದಚಾರಿ ಮಾರ್ಗದಲ್ಲಿ ಪ್ರಯಾಣಿಕರು ಒಂದೇ ಬಾರಿಗೆ ನುಗ್ಗಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ.
ನೂಕುನುಗ್ಗಲಿನ ವೇಳೆ ಕೆಲವರು ಕೆಳಗೆ ಬಿದ್ದಿದ್ದು, ಇವರ ಮೇಲೆ ಮತ್ತೊಂದಿಷ್ಟು ಜನ ಬಿದ್ದಿದ್ದಾರೆ. ಇವರನ್ನು ಎಬ್ಬಿಸುವಾಗ ಮತ್ತಷ್ಟು ಗೊಂದಲ ಹಾಗೂ ನೂಕುನುಗ್ಗಲು ಉಂಟಾಗಿದೆ.



