ಕೋಗಿಲು ಕ್ರಾಸ್ ಫಕೀರ್ ಬಡಾವಣೆಯಲ್ಲಿ ಇತ್ತೀಚೆಗೆ ನಡೆದ ತೆರವು ಕಾರ್ಯಾಚರಣೆ ಹಿನ್ನೆಲೆಯಲ್ಲಿ ನಡೆಯುತ್ತಿರುವ ಒಂದು ವೇಳೆ ಪೊಲೀಸ್ ತಪಾಸಣೆಯಲ್ಲಿ ಅಕ್ರಮ ಬಾಂಗ್ಲಾದೇಶಿಗರು ಪತ್ತೆಯಾದಲ್ಲಿ ಅವರಿಗೆ ಯಾವುದೇ ಪರ್ಯಾಯ ವಸತಿ ಸೌಲಭ್ಯ ನೀಡುವುದಿಲ್ಲ ಮತ್ತು ತಕ್ಷಣವೇ ಗಡಿಪಾರು ಮಾಡಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದ ಬಳಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬೆಂಗಳೂರಿನ ಕೋಗಿಲು ಲೇಔಟ್ನಲ್ಲಿ ಮನೆ ಕಳೆದುಕೊಂಡವರ ಪಟ್ಟಿಯನ್ನು ‘ ಬೃಹತ್ ಬೆಂಗಳೂರು ಪ್ರಾಧಿಕಾರ ‘ ಸಿದ್ಧಪಡಿಸಲಿದ್ದು, ಈ ಪಟ್ಟಿಯಲ್ಲಿರುವ ಪ್ರತಿಯೊಬ್ಬರ ಹಿನ್ನೆಲೆ, ಮೂಲ ಸ್ಥಳ ಮತ್ತು ಬೆಂಗಳೂರಿನಲ್ಲಿ ಅವರು ವಾಸಿಸುತ್ತಿರುವ ಅವಧಿಯನ್ನು ಪೊಲೀಸರು ಕೂಲಂಕಷವಾಗಿ ಪರಿಶೀಲಿಸಲಿದ್ದಾರೆ ಎಂದರು.
ಒಂದು ವೇಳೆ ತಪಾಸಣೆಯ ವೇಳೆ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿ ಪ್ರಜೆಗಳು ಪತ್ತೆಯಾದಲ್ಲಿ, ಅವರನ್ನು ತಕ್ಷಣವೇ ವಶಕ್ಕೆ ಪಡೆದು ನಿಯಮಾನುಸಾರ ಅವರ ದೇಶಕ್ಕೆ ಗಡಿಪಾರು ಮಾಡಲಾಗುವುದು ಹಾಗೂ ಅಂತಹ ವಿದೇಶಿ ಪ್ರಜೆಗಳಿಗೆ ಸರ್ಕಾರದ ವತಿಯಿಂದ ಯಾವುದೇ ಪರ್ಯಾಯ ಸೌಲಭ್ಯ ಅಥವಾ ವಸತಿ ನೀಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದಲ್ಲದೆ, ಈ ವಲಸಿಗರು ಯಾವುದಾದರೂ ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಕಂಡುಬಂದಲ್ಲಿ ಅಂತಹವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಕೋಗಿಲು ಲೇಔಟ್ ನಿರಾಶ್ರಿತರು ಅಕ್ರಮ ಬಾಂಗ್ಲಾದೇಶಿಗರು ಎಂದು ಆರೋಪಿಸಿದ್ದ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಪರಮೇಶ್ವರ್, “ಮಾಜಿ ಗೃಹ ಸಚಿವರಾಗಿ ಕಾನೂನು ಪ್ರಕ್ರಿಯೆ ತಿಳಿದಿರುವ ಅಶೋಕ್ ಅವರು ರಾಜಕೀಯ ಕಾರಣಕ್ಕಾಗಿ ಇಂತಹ ಹೇಳಿಕೆ ನೀಡುತ್ತಿದ್ದಾರೆ” ಎಂದು ಟೀಕಿಸಿದರು
ಕಾಫಿ ತೋಟಗಳಲ್ಲಿ ತಪಾಸಣೆ:
ಅಕ್ರಮ ವಲಸಿಗರ ಪತ್ತೆ ಕಾರ್ಯ ಕೇವಲ ಬೆಂಗಳೂರಿಗೆ ಸೀಮಿತವಾಗಿಲ್ಲ, ರಾಜ್ಯಾದ್ಯಂತ ನಡೆಯುತ್ತಿದೆ ವಿಶೇಷವಾಗಿ ಕಾಫಿ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಹಿನ್ನೆಲೆಯನ್ನು ಪರಿಶೀಲಿಸಿ ವರದಿ ನೀಡುವಂತೆ ಮಾಲೀಕರಿಗೆ ಸೂಚಿಸಲಾಗಿದೆ ಎಂದರು.
ಪೊಲೀಸ್ ತಂಡಗಳು ಕಾಲಕಾಲಕ್ಕೆ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿವೆ ಎಂದು ಅವರು ತಿಳಿಸಿದರು.
ನಾನೂ ಬಡ್ತಿ ನಿರೀಕ್ಷೆಯಲ್ಲಿದ್ದೇನೆ
ರಾಜಕೀಯವಾಗಿ ಪದೋನ್ನತಿ ಹೊಂದುವ ಮಹಾತ್ವಕಾಂಕ್ಷೆ ತಮಗೂ ಇದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಸ್ಪಷ್ಟಪಡಿಸಿದ್ದಾರೆ.
ಹೈಕಮಾಂಡ್ ತೀರ್ಮಾನಿಸಿದರೆ ರಾಜಕೀಯ ಪದೋನ್ನತಿ ದೊರೆಯಲಿದೆ ಎಲ್ಲರಂತೆ ನನಗೂ ಆಕಾಂಕ್ಷೆ ಇದೆ. ರಾಜಕೀಯ ಸೇರಿದಾಗ ಶಾಸಕ, ನಂತರ ಮಂತ್ರಿ ಆಗಬೇಕು, ಮುಂದಿನ ಹಂತಕ್ಕೆ ಹೋಗಬೇಕೆಂಬ ಆಸೆ ಇರುತ್ತದೆ ಎಂದು ಹೇಳಿದರು,
ಕಾಂಗ್ರೆಸ್ ವಲಯದಲ್ಲಿ ಪರಮೇಶ್ವರ್ ಮುಖ್ಯಮಂತ್ರಿ ಯಾಗಬೇಕು ಎಂಬ ಚರ್ಚೆಗಳ ನಡುವೆ ನಾನಾ ರೀತಿಯ ಗೊಂದಲದ ವಾತಾವರಣಗಳು ಸೃಷ್ಟಿಯಾಗು ತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಣ ಒಂದು ವೇಳೆ ನಾಯಕತ್ವ ಬದಲಾವಣೆಯಾಗುವುದೇ ಆದರೆ ದಲಿತರಿಗೆ ಮುಖ್ಯಮಂತ್ರಿ ಆಗಲು ಅವಕಾಶ ನೀಡಬೇಕು ಎಂದು ಪ್ರತಿಪಾದಿಸುವ ಮೂಲಕ ಪರೋಕ್ಷವಾಗಿ ಪರಮೇಶ್ವರ್ ಹೆಸರನ್ನು ಮುನ್ನೆಲೆಗೆ ತಂದಿದೆ.
ರಾಜಕೀಯವಾಗಿ ತಮ್ಮ ವೈಯಕ್ತಿಕ ಪದೋನ್ನತಿ ವಿಚಾರವಾಗಿ ಪಕ್ಷದ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಬೇಕು. ರಾಜಕೀಯವಾಗಿ ನಾನು ಆಶಾವಾದಿಯಾಗಿಯೇ ಈವರೆಗೂ ಬದುಕಿದ್ದೇನೆ. ಎಲ್ಲರಿಗೂ ಜೀವನದಲ್ಲಿ ಮಹತ್ವಕಾಂಕ್ಷಿಗಳಿರುತ್ತವೆ. ಅದೇ ರೀತಿ ನನಗೂ ಮಹತ್ವಾಕಾಂಕ್ಷೆ ಇದ್ದೇ ಇದೆ ಎಂದರು.
ರಾಜಕೀಯಕ್ಕೆ ಬಂದಾಗ ಶಾಸಕರಾಗಬೇಕು ಎಂಬ ಅಭಿಲಾಷೆಯಿತ್ತು, ಆನಂತರ ಮಂತ್ರಿಯಾಗಬೇಕು ಎಂಬ ಆಕಾಂಕ್ಷೆ ಇತ್ತು. ಪ್ರತಿ ಹಂತದಲ್ಲೂ ಮುಂದಿನ ಹಂತಕ್ಕೇರುವ ಅಭಿಲಾಷೆಗಳಿರುತ್ತವೆ. ಆದರೆ ಅಂತಿಮವಾಗಿ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟ ವಿಚಾರ ಎಂದರು.ರಾಜ್ಯ ರಾಜಕೀಯದಲ್ಲಿ ವಾತಾವರಣ ಯಾರಿಗೆ ಪೂರಕವಾಗಿದೆ ಎಂದು ಪ್ರತಿನಿತ್ಯವೂ ಚರ್ಚೆಯಾಗುತ್ತಿದೆ. ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಹೇಳಿದರು.
ಅಹಿತಕರ ಘಟನೆ ಆಗಿಲ್ಲ:
ಹೊಸ ವರ್ಷಕ್ಕೆ ಬೆಂಗಳೂರಿನಲ್ಲಿ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಇತ್ತು. ಒಂದು ಲೆಕ್ಕದ ಪ್ರಕಾರ ಏಳೆಂಟು ಲಕ್ಷ ಜನ ಭಾಗವಹಿಸಿದ್ದರು ನಾನೂ ಕೂಡಾ ಕಮಾಂಡ್ ಸೆಂಟರ್ನಲ್ಲಿ ಹೋಗಿ ಕುಳಿತು ಅವಲೋಕನ ನಡೆಸಿದೆ. ಈ ಬಾರಿ ಜವಾಬ್ದಾರಿಯಿಂದ ಹೊಸ ವರ್ಷ ಆಚರಿಸಿ ಎಂದು ಕರೆ ಕೊಟ್ಟಿದ್ದೇವು ಜವಾಬ್ದಾರಿಯಿಂದ ಜನ ಹೊಸ ವರ್ಷ ಆಚರಿಸಿದ್ದಾರೆ. 20 ಸಾವಿರ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಎಲ್ಲೂ ಅಹಿತಕರ ಘಟನೆ ಆಗಿಲ್ಲ, ಟ್ರಾಫಿಕ್ ಜಾಮ್ ಕೂಡಾ ಆಗಿಲ್ಲ” ಎಂದು ಹೇಳಿದರು.
ಯಾರೂ ಅಪಘಾತ ಮಾಡಿಕೊಂಡು ಪ್ರಾಣ ಹಾನಿ ಮಾಡಿಕೊಳ್ಳಲಿಲ್ಲ. ಮಾಧ್ಯಮದವರೂ ಹೊಸ ವರ್ಷಾಚರಣೆಗೆ ಸಹಕರಿಸಿದರು” ಎಂದರು.
30 ಮಂದಿಗೆ ಪದೋನ್ನತಿ:
30ಕ್ಕೂ ಹೆಚ್ಚು ಜನ ಡಿಐಜಿ, ಐಜಿಗಳಿಗೆ ಪದೋನ್ನತಿ ಕೊಡಲಾಗಿದೆ. ಇಷ್ಟೊಂದು ಮಂದಿಗೆ ಈ ಮೊದಲು ಒಟ್ಟಿಗೆ ಪದೋನ್ನತಿ ಸಿಕ್ಕಿರಲಿಲ್ಲ. ಎಲ್ಲರಿಗೂ ಜವಾಬ್ದಾರಿ ಕೊಡಲಾಗಿದೆ. ಇವತ್ತು ಅಧಿಕಾರಿಗಳೆಲ್ಲ ಬಂದಿದ್ದು, ಬ್ರೇಕ್ಫಾಸ್ಟ್ ಮಾಡಿದ್ವಿ” ಎಂದು ತಿಳಿಸಿದರು.
ಬೆಳಗಾವಿಯಲ್ಲಿ ಕಳ್ಳತನ ಪ್ರಕರಣ ಹೆಚ್ಚಾಗಿರುವುದು ಗಮನಕ್ಕೆ ಬಂದಿದೆ. ಹೊರಗಡೆಯಿಂದ ಕಳ್ಳರ ಟೀಮ್ ಬಂದಿರಬಹುದೆ ಎಂದು ಪರಿಶೀಲನೆ ನಡೀತಿದೆ, ಕ್ರಮ ಕೈಗೊಳ್ಳುತ್ತೇವೆ. ಅಧಿಕಾರಿಗಳ ಸಭೆ ಮಾಡಿದ್ದೇವೆ. ಹಿಂದಿನ ವರ್ಷದ ಘಟನೆಗಳು ಆಗದಂತೆ ಚರ್ಚೆ ಮಾಡಿದ್ದೇವೆ. ಮುಂದೆ ಆ ಘಟನೆಗಳು ಆಗದಂತೆ ಏನೇನು ಕ್ರಮ ಕೈಗೊಳ್ಳಬೇಕು ಎಂದು ಚರ್ಚಿಸಿದ್ದೇವೆ.
ಅಧಿಕಾರಿಗಳಿಗೆ ಆ ಸೂಕ್ಷ್ಮತೆ ತಿಳಿಸಿದ್ದೇನೆ. ನಾನೂ ಬುಧವಾರ ಮರ್ಯಾದಾ ಹತ್ಯೆ ನಡೆದ ಸ್ಥಳಕ್ಕೆ ಹೋಗಿದ್ದೆ. ಮರ್ಯಾದಾ ಹತ್ಯೆಗಳು ಈ ಕಾಲದಲ್ಲೂ ನಡೆಯುತ್ತಿವೆ. ಸಮಾಜಕ್ಕೆ ಸರಿಯಾದ ಸಂದೇಶ ಹೋಗ್ತಿಲ್ಲವೇನೋ. ಕಾನೂನಿನ ಬಗ್ಗೆ ಜನರಲ್ಲಿ ಅರಿವೂ ಬರಬೇಕು. ಈ ವರ್ಷ ಬಾಕಿ ಎಸ್ಐಟಿ, ಸಿಐಡಿ ತನಿಖೆಗಳನ್ನು ಮುಗಿಸ್ತೇವೆ. ಧರ್ಮಸ್ಥಳ ಸೇರಿದಂತೆ ಏನೇನು ಬಾಕಿ ಪ್ರಕರಣ ಇವೆಯೋ ಈ ವರ್ಷ ಮುಗಿಸ್ತೇವೆ” ಎಂದು ಸ್ಪಷ್ಟಪಡಿಸಿದರು.



