ಪ್ರವಾಸದಿಂದ ಮರಳಿದ ದಂಪತಿ ಅದೇ ಗುಂಗಿನಲ್ಲಿ ಮಲಗಿದ್ದ 4 ವರ್ಷದ ಮಗುವನ್ನು ಕಾರಿನಲ್ಲೇ ಮರೆತು ಹೋದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.
ಪ್ರೇಮಿಗಳ ದಿನದಂದು ಈ ಘಟನೆ ನಡೆದಿದ್ದು, ಕ್ಯಾಬ್ ನಲ್ಲಿ ಪ್ರವಾಸದಿಂದ ಮರಳಿದ ದಂಪತಿ ಕಾರಿನಲ್ಲಿ ಮಗು ಮಲಗಿರುವುದನ್ನು ಗಮನಿಸದೇ ಹಾಗೆಯೇ ಎದ್ದು ಹೋಗಿದ್ದಾರೆ. ಕ್ಯಾಬ್ ವಾಪಸ್ ಹೋಗಿದ್ದು, ತಡವಾಗಿ ಜ್ಞಾನೋದಯವಾದ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಕಾರ್ಯಾಚರಣೆಗಿಳಿದ ಪೊಲೀಸರು ಕ್ಯಾಬ್ ನಂಬರ್ ಪಡೆದು ಟ್ರ್ಯಾಕ್ ಮಾಡಿ ಚಾಲಕನನ್ನು ಸಂಪರ್ಕಿಸಿದ್ದಾರೆ. ಕಾರು ಚಾಲಕ ಕೂಡ ಈ ವಿಷಯ ಗಮನಿಸದೇ ಹೋಗಿದ್ದು, ಪೊಲೀಸರ ಕರೆ ಬಂದ ಕೂಡಲೇ ನೋಡಿ ಪೊಲೀಸರಿಗೆ ಸಹಕರಿಸಿದ್ದಾನೆ.
ಪೋಷಕರು ಮನೆಗೆ ಹೋಗಿ ಕೆಲವು ಸಮಯದ ನಂತರ ಮಗು ಕಾಣದೇ ಇರುವುದನ್ನು ಗಮನಿಸಿದ್ದಾರೆ. ಕೊನೆಗೆ ಅವರಿಗೆ ಮಗುವನ್ನು ಕಾರಿನಲ್ಲಿಯೇ ಮರೆತು ಹೋಗಿರುವುದನ್ನು ನೆನಪಿಸಿಕೊಂಡು ಗಾಬರಿ ಆಗಿದ್ದು, ತಕ್ಷಣ 112 ಸಂಖ್ಯೆಗೆ ಕರೆ ಮಾಡಿ ನೆರವು ಕೋರಿದ್ದಾರೆ.
ದೂರು ಬಂದ 2 ನಿಮಿಷದಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪೋಷಕರಿಂದ ಮಾಹಿತಿ ಪಡೆದು ವಾಹನ ಸಂಖ್ಯೆ ಮತ್ತು ಲೈವ್ ಸ್ಥಳವನ್ನು ಟ್ರ್ಯಾಕ್ ಮಾಡಿದರು, ಕ್ಯಾಬ್ ಚಾಲಕನನ್ನು ಸಂಪರ್ಕಿಸಿ, ಮಗುವಿನೊಂದಿಗೆ ದಂಪತಿಗಳ ಅಪಾರ್ಟ್ಮೆಂಟ್ಗೆ ವರದಿ ಮಾಡಲು ಕೇಳಿದರು. ಮಗು ಕಾರಿನಲ್ಲಿದೆ ಎಂದು ಚಾಲಕ ದೃಢಪಡಿಸಿದರು ಮತ್ತು ಶೀಘ್ರದಲ್ಲೇ ಒಂದು ಗಂಟೆಯೊಳಗೆ ದಂಪತಿಗಳ ನಿವಾಸಕ್ಕೆ ತೆರಳಿ ಮಗುವನ್ನು ಹಸ್ತಾಂತರಿಸಿದ್ದಾರೆ.
ಈ ಘಟನೆ ಶೀಘ್ರದಲ್ಲೇ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾದವು. ಬೆಂಗಳೂರು ಪೊಲೀಸರ ಪ್ರಯತ್ನವನ್ನು ಜನರು ಮೆಚ್ಚಿಕೊಂಡರೂ, ಪೋಷಕರು ತಮ್ಮ ಮಗುವಿನ ಬಗ್ಗೆ ಜಾಗರೂಕರಾಗಿಲ್ಲ ಎಂದು ಟೀಕಿಸಿದರು. ಇಂತಹವರು ತಂದೆ-ತಾಯಿ ಸ್ಥಾನಕ್ಕೆ ಕಳಂಕ ಎಂದು ಕೆಲವರು ಕಿಡಿಕಾರಿದ್ದಾರೆ.



