ಆರ್ ಸಿಬಿ ಸಂಭ್ರಮಾಚರಣೆ ವೇಳೆ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 11 ಮಂದಿ ಮೃತಪಟ್ಟ ಪ್ರಕರಣದಲ್ಲಿ ಆರ್ ಸಿಬಿ, ಡಿಎನ್ ಎ ಮತ್ತು ಕೆಎಸ್ ಸಿಎಗೆ ಕರ್ನಾಟಕ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಕಾಲ್ತುಳಿತ ಘಟನೆಗೆ ಸಂಬಂಧಿಸಿ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮಂಗಳವಾರ ರಾಜ್ಯ ಸರ್ಕಾರ ಆರ್ ಸಿಬಿ ಸಂಭ್ರಮಾಚರಣೆ ವೇಳೆ ಕೈಗೊಂಡ ಭದ್ರತಾ ಕ್ರಮಗಳ ಕುರಿತು ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಿತು. ಈ ಹಿನ್ನೆಲೆಯಲ್ಲಿ ಆರ್ ಸಿಬಿ, ಡಿಎನ್ ಎ ಮತ್ತು ಕೆಎಸ್ ಸಿಎಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಜೂನ್ 23ಕ್ಕೆ ಮುಂದೂಡಿತು.
ಮುಚ್ಚಿದ ಲಕೋಟೆಯಲ್ಲಿ ಏಕೆ ವರದಿ ಸಲ್ಲಿಸುತ್ತಿದ್ದೀರಿ ಎಂಬ ಹೈಕೋರ್ಟ್ ಪ್ರಶ್ನೆಗೆ ಉತ್ತರಿಸಿದ ಸರ್ಕಾರದ ಪರ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ತನಿಖೆ ಇನ್ನೂ ಬಾಕಿಯಿರುವುದರಿಂದ ಪೂರ್ವಾಗ್ರಹವಿರಬಾರದು, ಮೂರನೇ ವ್ಯಕ್ತಿಗಳ ವಿರುದ್ಧ ಅಭಿಪ್ರಾಯವೆಂದು ಭಾವಿಸಬಾರದು. ಹೀಗಾಗಿ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಲಾಗಿದೆ. ದಾಖಲೆಗಳನ್ನು ಹಂಚಿಕೊಳ್ಳುವುದಕ್ಕೆ ಸರ್ಕಾರದ ಆಕ್ಷೇಪವಿಲ್ಲ. ಆದರೆ ನ್ಯಾಯಾಂಗ ತನಿಖೆ ಬಾಕಿಯಿರುವುದರಿಂದ ವರದಿ ಬಹಿರಂಗ ಬೇಡ ಎಂದು ಹೇಳಿದರು.
ಪ್ರಕರಣದಲ್ಲಿ ಅಮೈಕಸ್ ಕ್ಯೂರಿ ಅಗತ್ಯವಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, ಮುಚ್ಚಿದ ಲಗೋಟೆಯಲ್ಲಿ ಸರ್ಕಾರ ಸಲ್ಲಿಸಿರುವ ವರದಿಯನ್ನು ಬಹಿರಂಗಗೊಳಿಸಲು ಕೆಲ ಅರ್ಜಿದಾರರು ಮನವಿ ಮಾಡಿದರು.
ಸರ್ಕಾರ ಪಾರದರ್ಶಕ, ಪ್ರಜಾಸತ್ತಾತ್ಮಕ ಪ್ರಕ್ರಿಯೆ ಅನುಸರಿಸಬೇಕು. ಮಾಹಿತಿಯ ಹಕ್ಕನ್ನು ಸರ್ಕಾರ ಗೌರವಿಸಬೇಕು. ಸರ್ಕಾರ ಯಾವುದೇ ಮಾಹಿತಿಯನ್ನೂ ಮುಚ್ಚಿಡಬಾರದು. ಸರ್ಕಾರ ಸಂಪೂರ್ಣ ತಪ್ಪು ವರದಿ ನೀಡಿದರೂ ತಿಳಿಯುವುದಿಲ್ಲ. ಸಾರ್ವಜನಿಕರ ಹಿತದೃಷ್ಟಿಯಿಂದ ವರದಿಯಲ್ಲಿನ ಅಂಶ ಬಹಿರಂಗವಾಗಬೇಕು. ಇಲಿ, ಬೆಕ್ಕಿನ ಆಟ ಸರಿಯಲ್ಲವೆಂದು ಅರ್ಜಿದಾರರು ವಾದ ಮಾಡಿದರು.



