ನವದೆಹಲಿ:ಕೇಂದ್ರ ಸರ್ಕಾರದ ಕಾರ್ಮಿಕ, ಕೃಷಿ ಮತ್ತು ಆರ್ಥಿಕ ನೀತಿಗಳನ್ನು ವಿರೋಧಿಸಿ ದೇಶಾದ್ಯಂತ 10ಕ್ಕೂ ಹೆಚ್ಚು ಕಾರ್ಮಿಕ ಸಂಘಗಳು ಗುರುವಾರ ರಾಷ್ಟ್ರವ್ಯಾಪಿ ಕರೆ ನೀಡಿರುವ ಭಾರತ್ ಬಂದ್ ನಿಂದಾಗಿ ಸಾರ್ವಜನಿಕ ಬ್ಯಾಂಕಿಂಗ್, ಸಾರಿಗೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.
ಕೇಂದ್ರ ಸರ್ಕಾರದ ಕಾರ್ಮಿಕ, ಕೃಷಿ ಮತ್ತು ಆರ್ಥಿಕ ನೀತಿಗಳನ್ನು ಖಂಡಿಸಿ ಮುಷ್ಕರದಲ್ಲಿ ಕನಿಷ್ಠ 30 ಕೋಟಿ ಕಾರ್ಮಿಕರು ಭಾಗವಹಿಸಲಿದ್ದಾರೆ ಎಂದು ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮರ್‌ಜೀತ್ ಕೌರ್ ಹೇಳಿದ್ದಾರೆ.
ಬಂದ್ ನಿಂದಾಗಿ 600 ಜಿಲ್ಲೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದ್ದು, ತುರ್ತು ಸೇವೆಗಳಾದ ಆಂಬುಲೆನ್ಸ್, ಔಷಧ ಅಂಗಡಿಗಳು ಸೇರಿದಂತೆ ಅಗತ್ಯ ವಸ್ತುಗಳ ಸೇವೆಯಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ.
10 ಕೇಂದ್ರ ಕಾರ್ಮಿಕ ಸಂಘಟನೆಗಳು ಮತ್ತು ರಾಷ್ಟ್ರೀಯ ಕಾರ್ಮಿಕ ಒಕ್ಕೂಟಗಳು ಮುಷ್ಕರಕ್ಕೆ ಬೆಂಬಲ ಘೋಷಿಸಿವೆ. ಯುನೈಟೆಡ್ ಫಾರ್ಮಸ್್ರ ಫ್ರಂಟ್, ಕೃಷಿ ಕಾರ್ಮಿಕ ಸಂಘಟನೆಗಳು, ಸಿಪಿಐ (ಎಂ) ಮತ್ತು ಸಿಪಿಐ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ಮುಷ್ಕರಕ್ಕೆ ತಮ್ಮ ಬೆಂಬಲವನ್ನು ಘೋಷಿಸಿವೆ. ರಾಜ್ಯ ಸರಕಾರಿ ನೌಕರರು, ಶಿಕ್ಷಕರ ಸಂಘಟನೆಗಳು, ಬ್ಯಾಂಕ್‌ಗಳ ನೌಕರರು, ವಿಮಾ, ರಕ್ಷಣಾ, ರೈಲ್ವೆ, ಬಂದರು, ವಿಮಾನಯಾನ ಮತ್ತು ಸಂಬಂಧಿತ ಗುತ್ತಿಗೆ ಕಾರ್ಮಿಕರು ರಾಷ್ಟ್ರೀಯ ಮುಷ್ಕರಕ್ಕೆ ಬೆಂಬಲ ನೀಡಲಿದ್ದಾರೆ. ಮಹಿಳೆಯರು, ವಿದ್ಯಾರ್ಥಿ ಮತ್ತು ಯುವ ಸಂಘಟನೆಗಳು ಸಹ ಮುಷ್ಕರದ ದಿನದಂದು ಬೀದಿಗಿಳಿದು ಪ್ರತಿಭಟನೆ ನಡೆಸಲಿವೆ.
ಅಗತ್ಯ ವಸ್ತು ಸೇವೆ ಅಭಾದಿತ
ಹಾಲು, ಪತ್ರಿಕೆಗಳು, ಆಸ್ಪತ್ರೆಗಳು, ಮೆಡಿಕಲ್, ಅಗ್ನಿಶಾಮಕ, ಆಂಬ್ಯುಲೆನ್ಸ್‌ಗಳಂತಹ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಎಲ್ಲ ವಲಯಗಳ ಕಾರ್ಮಿಕರು ಈ ಮುಷ್ಕರದಲ್ಲಿ ಭಾಗಿಯಾಗಲಿದ್ದಾರೆ.



