ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕಾರ್ಡ್ ದಾರರಿಗೆ ನೀಡಲಾಗುತ್ತಿದ್ದ 10 ಕೆಜಿ ಅಕ್ಕಿಯಲ್ಲಿ 5 ಕೆಜಿ ಅಕ್ಕಿ ಕಡಿತ ಮಾಡಿ ಆಹಾರ ಕಿಟ್ ನೀಡಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ 5 ಕೆಜಿ ಅಕ್ಕಿ, ತೊಗರಿಬೇಳೆ, ಸಕ್ಕರೆ, ಉಪ್ಪು ಸೇರಿದಂತೆ ಆಹಾರ ಕಿಟ್ ನೀಡಲು ತೀರ್ಮಾನಿಸಲಾಗಿದೆ.
ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಸಚಿವ ಎಚ್.ಕೆ. ಪಾಟೀಲ್ ಈ ವಿಷಯ ತಿಳಿಸಿದ್ದು, 10 ಕೆಜಿ ಅಕ್ಕಿ ಬದಲು 5 ಕೆಜಿ ಅಕ್ಕಿ ಇರುವ ಆಹಾರ ಕಿಟ್ ನೀಡಲು ತೀರ್ಮಾನಿಸಲಾಗಿದೆ. ಆಹಾರ ಕಿಟ್ ನೀಡುವುದರಿಂದ ಸರ್ಕಾರಕ್ಕೆ ಸ್ವಲ್ಪ ಮಟ್ಟಿಗೆ ಅಧಿಕ ಹೊರೆ ಆಗಲಿದೆ ಎಂದರು.
10 ಕೆಜಿ ಅಕ್ಕಿ ಬದಲು 5 ಕೆಜಿ ಅಕ್ಕಿ ಹಾಗೂ ಉಳಿದ 5 ಕೆಜಿಗೆ ಬದಲಾಗಿ 2 ಕೆಜಿ ತೊಗರಿ ಬೇಳೆ, 1 ಕೆಜಿ ಅಡುಗೆ ಎಣ್ಣೆ, 1 ಕೆಜಿ ಸಕ್ಕರೆ ಮತ್ತು 1 ಕೆಜಿ ಉಪ್ಪು ಸೇರಿದ ಇಂದಿರಾ ಆಹಾರ ಕಿಟ್ ನೀಡಲಾಗುವುದು ಎಂದು ಅವರು ವಿವರಿಸಿದರು.



