ಇದೇ ತಿಂಗಳು ಮದುವೆ ಆಗಬೇಕಿದ್ದ ಜೋಡಿ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದಾಗ ಎಕೋ ವಾಹನ ಡಿಕ್ಕಿ ಹೊಡೆದಿದ್ದರಿಂದ ಸ್ಥಳದಲ್ಲೇ ಮೃತಪಟ್ಟ ಆಘಾತಕಾರಿ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಸಂಭವಿಸಿದೆ.
ಅಂಬಾರಕೊಪ್ಪ ಕ್ರಾಸ್ ಬಳಿ ಬೈಕ್ನಲ್ಲಿ ತೆರಳುತ್ತಿರುವಾಗ ಸಂಭವಿಸಿದ ಅಪಘಾತದಲ್ಲಿ ಸೊರಬ ತಾಲೂಕು ಗಂಗೊಳ್ಳಿ ಗ್ರಾಮದ ನಿವಾಸಿ ಬಸವನಗೌಡ (24) ಹಾಗೂ ಶಿಕಾರಿಪುರ ತಾಲೂಕು ಮತ್ತಿಕೋಟೆ ಗ್ರಾಮದ ನಿವಾಸಿ ರೇಖಾ (22) ಮೃತಪಟ್ಟಿದ್ದಾರೆ.
ರೇಖಾ ಹಾಗೂ ಬಸವನಗೌಡ ಅವರಿಗೆ ಕಳೆದ ಶ್ರಾವಣ ಮಾಸದಲ್ಲಿ ಮದುವೆ ನಿಶ್ಚಿತಾರ್ಥವಾಗಿತ್ತು. ಮಂಗಳವಾರ ಭಾವೀ ಮಾವನ ಮನೆಗೆ ಬಂದಿದ್ದ ಬಸವನಗೌಡ ಸಂಗಾತಿಯ ತವರೂರಾದ ಮತ್ತಿಕೋಟೆ ಗ್ರಾಮದಿಂದ ತೊಗರ್ಸಿ ದೇವಸ್ಥಾನಕ್ಕೆ ಬೈಕಿನಲ್ಲಿ ತೆರಳುತ್ತಿದ್ದರು.
ಶಿಕಾರಿಪುರದ ಅಂಬಾರಕೊಪ್ಪ ಕ್ರಾಸ್ ಬಳಿ ಇರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಮುಂಭಾಗದಲ್ಲಿ ವೇಗವಾಗಿ ಬರುತ್ತಿದ್ದ ಎಕೋ ವಾಹನ ಇವರ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಕುಟುಂಬದವರ ಆಕ್ರಂದನ
ಆಸ್ಪತ್ರೆಗೆ ಆಗಮಿಸಿದ ರೇಖಾಳ ತಂದೆ ಬಸವರಾಜಪ್ಪ ಮತ್ತು ಕುಟುಂಬದವರು, ‘ಬೈಕ್ ಬಿಟ್ಟು ಬಸ್ಗೆ ಹೋಗಿ ಎಂದು ಎಷ್ಟು ಸಲ ಹೇಳಿದರೂ ನನ್ನ ಮಾತು ಕೇಳದೇ ಬೈಕ್ ಮೇಲೆ ಹೊರಟ ಜೋಡಿ ಮದುವೆಯ ಮುಂಚೆ ಮಸಣ ಸೇರಿದ್ದಾರೆ’ ಎಂದು ಕಣ್ಣಿಟ್ಟಿದ್ದಾರೆ.
ಕೆಲವೇ ದಿನಗಳಲ್ಲಿ ಹಸೆ ಮಣೆ ಏರುವ ಉತ್ಸಾಹದಲ್ಲಿ ಇದ್ದ ಜೋಡಿ ಜೀವಗಳು ವಿಧಿಯಾಟಕ್ಕೆ ಬಲಿಯಾಗಿ ಮಸಣ ಸೇರಿದ್ದು, ಎರಡೂ ಗ್ರಾಮಸ್ಥರಲ್ಲಿ ಬೇಸರ ತರಿಸಿದೆ. ಈ ಕುರಿತು ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



