ಜೆಡಿಎಸ್ ಮುಖಂಡ ವೆಂಕಟೇಶ್ ಕೊಲೆ ಮಾಡಿದ ಇಬ್ಬರು ಆರೋಪಿಗಳನ್ನು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಸ್ಫೋಟಕ ಮಾಹಿತಿಯನ್ನು ಬಾಯಿಬಿಟ್ಟಿದ್ದಾರೆ.
ಸ್ಥಳೀಯ ನಿವಾಸಿಗಳಾದ ಧನು ಅಲಿಯಾಸ್ ಧನರಾಜ್ ಹಾಗೂ ಸಹಚರ ಸತೀಶ್ ಅವರನ್ನು ಬಂಧಿಸಲಾಗಿದ್ದು, ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ಇವರನ್ನು ಬಂಧಿಸಲಾಗಿದ್ದು, ಉಳಿದವರಿಗೆ ಶೋಧ ಕಾರ್ಯ ನಡೆದಿದೆ.
ವಿಚಾರಣೆ ವೇಳೆ ಕಳೆದ ಲೋಕಸಭಾ ಚುನಾವಣೆ ವೇಳೆ ಕೆಲಸ ಮಾಡಿದ್ದಕ್ಕಾಗಿ ನೀಡಬೇಕಿದ್ದ ಹಣ ನೀಡದೇ ವೆಂಕಟೇಶ್ ವಂಚಿಸಿದ್ದರು. ಈ ವಿಷಯದಲ್ಲಿ ಇತ್ತೀಚೆಗೆ ಧನರಾಜ್ ಹಾಗೂ ಅರವಿಂದ್ ಪ್ರಸ್ತಾಪಿಸಿದಾಗ ಬಾರ್ ನಲ್ಲಿ ವೆಂಕಟೇಶ್ ಹಲ್ಲೆ ಮಾಡಿದ್ದರು.
ನಂತರ ವಿಷಯ ತಿಳಿದ ಸತೀಶ್ ಧನರಾಜ್ ಮತ್ತು ಅರವಿಂದ್ ಪರ ಸಂಧಾನಕ್ಕಾಗಿ ವೆಂಕಟೇಶ್ ಬಳಿ ಹೋದಾಗ ಆತನ ಮೇಲೂ ಹಲ್ಲೆ ಮಾಡಿದ್ದ ವೆಂಟಕೇಶ್ ಇವರಿಗೆ ಎದುರಿಗೆ ಸಿಕ್ಕಾಗಲೆಲ್ಲಾ ಬಾಯಿಗೆ ಬಂದಂತೆ ನಿಂದಿಸುತ್ತಿದ್ದರು.
ವೆಂಕಟೇಶ್ ವರ್ತನೆಯಿಂದ ತೀವ್ರ ಅಸಮಾಧಾನಗೊಂಡಿದ್ದ ಮೂವರು ವೆಂಕಟೇಶ್ ಗೆ ಬುದ್ದಿ ಕಲಿಸಲು ತೀರ್ಮಾನಿಸಿ ಜನವರಿ 3ರಂದು ರಾತ್ರಿ ಹತ್ಯೆಗೈದಿದ್ದರು ಎಂದು ಚಿಕ್ಕಬಳ್ಳಾಪುರ ಎಸ್ಪಿ ಕುಶಾಲ್ ಚೌಕ್ಸೆ ಮಾಹಿತಿ ನೀಡಿದ್ದಾರೆ.
ಸ್ಕೂಟಿಯಲ್ಲಿ ತೆರಳುತ್ತಿದ್ದ ವೆಂಕಟೇಶ್ ನನ್ನು ಅಡ್ಡಗಟ್ಟಿದ್ದ 6 ಮಂದಿ ದುಷ್ಕರ್ಮಿಗಳು ಹಂದಿ ಕೊಯ್ಯುವ ಚಾಕುವಿನಿಂದ 6 ಮಂದಿ ದಾಳಿ ಮಾಡಿ ಬರ್ಬರವಾಗಿ ಹತ್ಯೆ ಮಾಡಿದ್ದರು. ದಾಳಿ ವೇಳೆ ವೆಂಕಟೇಶ್ ಅವರ ಕೈ ಕಟ್ ಆಗಿ ಬಿದ್ದಿತ್ತು.