ಬೆಳಗಾವಿ: ಎಂಟು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕಲ್ಲು ಕಟ್ಟಿ ಬಾವಿಗೆ ಎಸೆದು ಕೊಲೆಗೈದಿದ್ದ ಕಿರಾತಕನಿಗೆ ಬೆಳಗಾವಿ ಜಿಲ್ಲಾ ಪೋಕ್ಸೋ ನ್ಯಾಯಾಲಯ ಮರಣದಂಡನೆ ಶಿಕ್ಷೆ ಹಾಗೂ ೧೦ ಲಕ್ಷ ರೂ. ದಂಡ ವಿಧಿಸಿ ಐತಿಹಾಸಿಕ ತೀರ್ಪು ನೀಡಿದೆ.
ಬಾಲ್ಯದ ಅಮಾಯಕತೆಯನ್ನು ಬಲಿ ಪಡೆದಿದ್ದ ಜಿಲ್ಲೆಯ ರಾಯಬಾಗ ತಾಲೂಕಿನ ಪರಮಾನಂದವಾಡಿ ಮೂಲದ ಆರೋಪಿ ಭರತೇಶ ರಾವಸಾಬ ಮಿರ್ಜಿ (28) ಗೆ ಬೆಳಗಾವಿ ಜಿಲ್ಲಾ ಪೊಕ್ಸೊ ನ್ಯಾಯಾಲಯವು ಮರಣದಂಡನೆಯ ಶಿಕ್ಷೆಯನ್ನು ವಿಧಿಸಿದೆ.
2019 ರಲ್ಲಿ ಎಂಟು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಅತಿ ಬರ್ಬರವಾಗಿ ಕೊಲೆ ಮಾಡಿದ್ದ ಪ್ರಕರಣ ಬೆಳಗಾವಿಯಲ್ಲಿ ಸಂಚಲನ ಮೂಡಿಸಿತ್ತು. ಸುದೀರ್ಘ ವಿಚಾರಣೆ ನಂತರ ರಾಯಬಾಗ ತಾಲೂಕಿನ ಪರಮಾನಂದವಾಡಿ ಮೂಲದ ಆರೋಪಿ ಭರತೇಶ ರಾವಸಾಬ ಮಿರ್ಜಿ (28) ಗೆ ಮರಣದಂಡನೆ ವಿಧಿಸಿ ಶನಿವಾರ ಮಹತ್ವದ ತೀರ್ಪು ನೀಡಿದೆ.
ಪ್ರಕರಣದ ಹಿನ್ನೆಲೆ:
2019ರ ಅಕ್ಟೋಬರ್ 15ರ ಸಂಜೆ ಎಂಟು ವರ್ಷದ ಬಾಲಕಿ ಮನೆ ಸಮೀಪದ ಅಂಗಡಿಗೆ ತೆರಳಿ ಹಿಂತಿರುಗುತ್ತಿದ್ದಾಗ ಆರೋಪಿ ಭರತೇಶ್ ಬಾಲಕಿಯನ್ನು ತನ್ನ ಮನೆಗೆ ಕರೆದೊಯ್ದು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದನು. ಆ ನಂತರ, ತನ್ನ ಕೃತ್ಯ ಬಯಲಾಗದಿರಲೆಂದು ಆತ ಆಕೆಯ ದೇಹಕ್ಕೆ ಕಲ್ಲನ್ನು ಕಟ್ಟಿ, ಸಮೀಪದ ಬಾವಿಗೆ ಎಸೆದು ಕ್ರೂರವಾಗಿ ಕೊಲೆ ಮಾಡಿದ್ದನು. ಬಾಲಕಿ ನಾಪತ್ತೆಯಾದ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ತೀವ್ರ ಹುಡುಕಾಟ ನಡೆಸಲಾಗಿತ್ತು. ಕೊನೆಗೆ, ಶ್ವಾನದಳದ ನೆರವಿನಿಂದ ಬಾವಿಯಲ್ಲಿ ಬಾಲಕಿಯ ಶವವು ಪತ್ತೆಯಾಗಿತ್ತು.
ಸಮಗ್ರ ಸಾಕ್ಷ್ಯಾಧಾರ, ಖಚಿತವಾದ ಆರೋಪ
ಬೆಳಗಾವಿಯ ಜಿಲ್ಲಾ ಪೊಕ್ಸೊ ನ್ಯಾಯಾಲಯದಲ್ಲಿ ನ್ಯಾಯಾಧೀಶೆ ಸಿ.ಎಂ. ಪುಷ್ಪಲತಾ ಅವರ ಸಮ್ಮುಖದಲ್ಲಿ ಈ ಪ್ರಕರಣದ ಸುದೀರ್ಘ ವಿಚಾರಣೆ ನಡೆಯಿತು. ಪ್ರಾಸಿಕ್ಯೂಷನ್ ಪರವಾಗಿ, ವಿಶೇಷ ಸರಕಾರಿ ಅಭಿಯೋಜಕ ಎಲ್.ವಿ. ಪಾಟೀಲ್ ಅವರು ಪ್ರಬಲ ವಾದ ಮಂಡಿಸಿದರು.
ವಿಚಾರಣೆಯ ವೇಳೆ, 20 ಸಾಕ್ಷಿಗಳ ಹೇಳಿಕೆಗಳು, 106 ದಾಖಲೆಗಳು ಮತ್ತು 22 ಮುದ್ದೆಮಾಲುಗಳ ಆಧಾರದ ಮೇಲೆ ಆರೋಪಿ ಭರತೇಶನ ವಿರುದ್ಧದ ಆರೋಪಗಳು ಸಂಪೂರ್ಣವಾಗಿ ಸಾಬೀತಾದವು. ಸಾಕ್ಷ್ಯಾಧಾರಗಳು ಮತ್ತು ಪ್ರಾಸಿಕ್ಯೂಷನ್‌ನ ವಾದದ ಬಲದಿಂದಾಗಿ, ನ್ಯಾಯಾಲಯವು ಆರೋಪಿಯನ್ನು ದೋಷಿ ಎಂದು ನಿರ್ಧರಿಸಿತು.
ನ್ಯಾಯಾಲಯದ ಕಠಿಣ ತೀರ್ಪು
ಸೆಪ್ಟೆಂಬರ್ 26, 2025ರಂದು ನ್ಯಾಯಾಧೀಶೆ ಸಿ.ಎಂ. ಪುಷ್ಪಲತಾ ಅವರು ಐತಿಹಾಸಿಕ ತೀರ್ಪು ನೀಡಿದರು. ಆರೋಪಿ ಭರತೇಶ್ ರಾವಸಾಬ ಮಿರ್ಜಿಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸಲಾಯಿತು. ಮರಣದಂಡನೆ ಜೊತೆಗೆ, ನ್ಯಾಯಾಲಯವು ವಿವಿಧ ಶಿಕ್ಷೆಗಳು ಮತ್ತು ದಂಡವನ್ನೂ ವಿಧಿಸಿದೆ.
ಅತ್ಯಾಚಾರಕ್ಕೆ ಬಲಿಯಾದ ಬಾಲಕಿಯ ಕುಟುಂಬಕ್ಕೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ, ಬಾಲಕಿಯ ತಂದೆ-ತಾಯಿಗೆ 10 ಲಕ್ಷ ರೂಪಾಯಿಗಳ ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ನ್ಯಾಯಾಲಯ ನಿರ್ದೇಶನ ನೀಡಿದೆ.



