ಕಾಂಗ್ರೆಸ್ ಜೊತೆಗಿನ ನಮ್ಮ ಮೈತ್ರಿ ಬಲವಂತದ ಮದುವೆ ಆಗಿದ್ದು, ಅನೈತಿಕವಾಗಿತ್ತು. ಆದ ಕಾರಣ ವಿಚ್ಚೇದನ ನೀಡಬೇಕಾಯಿತು ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ತಿರುಗೇಟು ನೀಡಿದ್ದಾರೆ.
ರಾಜ್ಯಸಭೆಯಲ್ಲಿ ತಮ್ಮ ಅವಧಿ ಮುಕ್ತಾಯದ ಹಿನ್ನೆಲೆಯಲ್ಲಿ ಬುಧವಾರ ಬೀಳ್ಕೊಡುಗೆ ಭಾಷಣ ಮಾಡಿದ ಮಲ್ಲಿಕಾರ್ಜುನ ಖರ್ಗೆ, ನಮ್ಮ ಜೊತೆ ಪ್ರೀತಿ ಮಾಡಿ ಮೋದಿ ಅವರನ್ನು ಮದುವೆ ಆಗಿದ್ದೀರಿ. ಯಾಕೆ ಎಂದು ತಿಳಿಯಲಿಲ್ಲ ಎಂದು ಹೇಳಿದ್ದರು.
ಈ ಹೇಳಿಕೆಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡುವ ಮೂಲಕ ತಿರುಗೇಟು ನೀಡಿದ ದೇವೇಗೌಡರು, ಯುಗಾದಿ ಹಬ್ಬದ ಕಾರಣ ನಾನು ಬೇಗನೇ ಬೆಂಗಳೂರಿಗೆ ಹೊರಟೆ. ಹಾಗಾಗಿ ನಿಮ್ಮ ಭಾಷಣದ ವೇಳೆ ನಾನು ರಾಜ್ಯಸಭೆಯಲ್ಲಿ ಇರಲಿಲ್ಲ. ಇದ್ದಿದ್ದರೆ ಅಲ್ಲಿಯೇ ಉತ್ತರ ಕೊಡುತ್ತಿದ್ದೆ ಎಂದಿದ್ದಾರೆ.
ಕಾಂಗ್ರೆಸ್ ಜೊತೆಗಿನ ನಮ್ಮ ಮೈತ್ರಿ ಬಲವಂತದ್ದಾಗಿತ್ತು. ಆದ್ದರಿಂದ ಅನೈತಿಕ ಹಾಗೂ ಹಿಂಸಾರೂಪದ ಸಂಬಂಧದಿಂದ ಹೊರಗೆ ಬರಲು ವಿಚ್ಚೇದನ ನೀಡಬೇಕಾಯಿತು ಎಂದು ದೇವೇಗೌಡರು ಹೇಳಿದ್ದಾರೆ.



