ಕಲಬುರಗಿಯ ಪ್ರತಿಷ್ಠಿತ ಗುಲಬರ್ಗಾ ವಿಶ್ವವಿದ್ಯಾಲಯದ ಜ್ಞಾನಗಂಗಾ ಆವರಣದಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ 43ನೇ ವಾರ್ಷಿಕ ಘಟಿಕೋತ್ಸವದಲ್ಲಿಂದು ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸಿದ ಸಾಧನೆಯನ್ನು ಪರಿಗಣಿಸಿ ಮಾಜಿ ಸಚಿವರು ಮತ್ತು ಬಿಜೆಪಿ ರಾಜ್ಯ ಉಪಾಧ್ಯಕ್ಷ ಡಾ. ಮುರುಗೇಶ್ ಆರ್ ನಿರಾಣಿ ಅವರಿಗೆ ‘ಗೌರವ ಡಾಕ್ಟರೇಟ್ ಪದವಿ‘ ಪ್ರದಾನ ಮಾಡಿ ಗೌರವಿಸಿದರು.
ಘಟಿಕೋತ್ಸವದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯದ ಗೌರವಾನ್ವಿತ ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯಗಳ ಕುಲಾಧಿಪತಿ ಥಾವರ್ ಚಂದ್ ಗೆಹ್ಲೋಟ್ ಪದವಿ ಪ್ರದಾನ ಮಾಡಿ ಗೌರವಿಸಿದರು.
ಘಟಿಕೋತ್ಸವದಲ್ಲಿ ರಾಜ್ಯದ ಉನ್ನತ ಶಿಕ್ಷಣ ಸಚಿವರು ಮತ್ತು ವಿಶ್ವವಿದ್ಯಾಲಯಗಳ ಸಮಕುಲಾಧಿಪತಿಗಳಾದ ಡಾ.ಎಂ.ಸಿ. ಸುಧಾಕರ್ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಪುಣೆಯ ಉನ್ನತ ರಕ್ಷಣಾ ತಂತ್ರಜ್ಞಾನ ಸಂಸ್ಥೆ (ಡೀಮ್ಡ್ ವಿಶ್ವವಿದ್ಯಾಲಯ) ಯ ವಿಶ್ರಾಂತ ಕುಲಪತಿ ಪ್ರೊ. ಎಲ್.ಎಂ. ಪಟ್ನಾಯಕ್ ಉದ್ಘಾಟನ ಭಾಷಣವನ್ನು ನೆರವೇರಿಸಿದರು. ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಶಿಕಾಂತ ಎಸ್ ಉಡಿಕೇರಿ ಸರ್ವರಿಗೂ ಆತ್ಮೀಯ ಸ್ವಾಗತ ಕೋರಿದರು.
ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿನ ಸಾಧನೆಗೆ ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಮತ್ತು ಸಾಮಾಜಿಕ ಸೇವೆಯಲ್ಲಿನ ಸಾಧನೆಗೆ ಹೋರಾಟಗಾರರಾದ ಕೇದಾರ ಲಿಂಗಯ್ಯ ಹಿರೇಮಠ್ ಅವರನ್ನು ಸಹ ಗೌರವ ಡಾಕ್ಟರೇಟ್ ಪದವಿಯಿಂದ ಸನ್ಮಾನಿಸಲಾಯಿತು. ಚಿನ್ನದ ಪದಕ ಪಡೆದ ಹಾಗೂ ವಿವಿಧ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಡಾ. ಮುರುಗೇಶ್ ಆರ್. ನಿರಾಣಿ ಅವರು ಅಭಿನಂದನೆ ಸಲ್ಲಿಸಿದರು.
ಘಟಿಕೋತ್ಸವದಲ್ಲಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಮತ್ತು ವಿದ್ಯಾವಿಷಯಕ ಪರಿಷತ್ ಸದಸ್ಯರು, ವಿತ್ತಾಧಿಕಾರಿ ಶ್ರೀಮತಿ ಜಯಾಂಬಿಕಾ, ಕುಲಸಚಿವರು (ಮೌಲ್ಯಮಾಪನ) ಡಾ. ಎನ್.ಜಿ. ಕಣ್ಣೂರು, ಕುಲಸಚಿವ ಪ್ರೊ. ರಮೇಶ್ ಲಂಡನಕರ್, ವಿಶ್ವವಿದ್ಯಾಲಯದ ಭೋದಕ ಮತ್ತು ಭೋದಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಗಣ್ಯರು ಮತ್ತು ಇತರ ಪ್ರಮುಖರು ಉಪಸ್ಥಿತರಿದ್ದರು.



