ಬೆಂಗಳೂರು: ಅಧಿಕಾರ ವಿಕೇಂದ್ರೀಕರಣ ದಿವಂಗತ ರಾಜೀವ್ ಗಾಂಧೀ ಅವರ ಕಲ್ಪನೆಯಾಗಿದ್ದು, ಈ ವರ್ಷಾಂತ್ಯದೊಳಗೆ ಎಲ್ಲ ಪಂಚಾಯ್ತಿಗಳಿಗೆ ಚುನಾವಣೆ ನಡೆಸಲು ಕ್ರಮವಹಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ಪರಿಚಯಾತ್ಮಕ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ 8 ವಾರಗಳಲ್ಲಿ ಕ್ಷೇತ್ರ ಪುನರ್ವಿಂಗಡಣೆ ಕಾರ್ಯ ಹಾಗೂ ಮೀಸಲಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ನಂತರ ರಾಜ್ಯ ಚುನಾವಣೆ ಆಯೋಗ ಚುನಾವಣೆ ಪ್ರಕ್ರಿಯೆ ನಡೆಸಲಿದೆ ಎಂದರು.
ಸಭೆಯಲ್ಲಿ ಇಲಾಖೆಯ ಕಾರ್ಯದರ್ಶಿಗಳಾದ ಸಮೀರ್ ಶುಕ್ಲ, ರಂದೀಪ್ ಡಿ, ಪಂಚಾಯತ್ ರಾಜ್ ಆಯುಕ್ತರಾದ ಡಾ ಅರುಂಧತಿ, ಕೆ.ಆರ್.ಐ.ಡಿ.ಎಲ್. ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಗೌಡ, ಕುಡಿಯುವ ನೀರು ಪೂರೈಕೆ ವಿಭಾಗದ ಆಯುಕ್ತರಾದ ಫೌಜಿಯಾ ತರುನ್ನುಂ ಮತ್ತಿತರರು ಪಾಲ್ಗೊಂಡಿದ್ದರು.



