ಕಾಮಿಡಿ ಶೋ ನಿರೂಪಕ ಕಪಿಲ್ ಶರ್ಮಾ, ಹಾಸ್ಯ ನಟ ರಾಜ್‌ಪಾಲ್ ಯಾದವ್ ಸೇರಿದಂತೆ ಬಾಲಿವುಡ್ ನ ನಾಲ್ವರು ಸೆಲೆಬ್ರೆಟಿಗಳಿಗೆ ಇ-ಮೇಲ್ ಮೂಲಕ ಜೀವ ಬೆದರಿಕೆ ಸಂದೇಶಗಳು ಬಂದಿವೆ.
ಬಾಲಿವುಡ್ ನಟ ಸೈಫ್ ಅಲಿ ಖಾನ್ ಮನೆಗೆ ನುಗ್ಗಿ ದಾಳಿ ನಡೆದ ಘಟನೆ ಬೆನ್ನಲ್ಲೇ ಇದೀಗ ನಾಲ್ವರು ಸೆಲೆಬ್ರೆಟಿಗಳಿಗೆ ಬೆದರಿಕೆ ಕರೆ ಬಮದಿರುವುದು ಆತಂಕ ಹೆಚ್ಚಿಸಿದೆ. ಇದಕ್ಕೂ ಮುನ್ನ ಸಲ್ಮಾನ್ ಖಾನ್, ಶಾರೂಖ್ ಖಾನ್ ಅವರಿಗೆ ಬೆದರಿಕೆ ಕರೆಗಳು ಬರುತ್ತಿದ್ದವು.
ಬಾಲಿವುಡ್ ಸೆಲೆಬ್ರೆಟಿಗಳಿಗೆ ಬೆದರಿಕೆ ಕರೆಗಳು ಬಂದ ಹಿನ್ನೆಲೆಯಲ್ಲಿ ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದು, ಭದ್ರತೆ ಹೆಚ್ಚಿಸಲಾಗಿದೆ.
ಕಪಿಲ್ ಶರ್ಮಾ, ರಾಜ್‌ಪಾಲ್ ಯಾದವ್, ಕೊರಿಯೋಗ್ರಾಫರ್ ರೆಮೋ ಡಿಸೋಜಾ, ಸುಗಂಧ ಮಿಶ್ರಾ ಅವರಿಗೆ ಬೆದರಿಕೆವೊಡ್ಡಿ ಇಮೇಲ್ ಸಂದೇಶಗಳು ಪಾಕಿಸ್ತಾನದಿಂದ ಬಂದಿವೆ ಎಂದು ಹೇಳಲಾಗಿದೆ.
ನಿಮ್ಮ ಎಲ್ಲಾ ಚಟುವಟಿಕೆಯನ್ನು ನಾವು ಹತ್ತಿರದಿಂದ ಗಮನಿಸುತ್ತಿದ್ದೇವೆ. ನಾವು ಹೇಳಿದಂತೆ ಕೇಳಬೇಕು. ಈ ಬಗ್ಗೆ 8 ಗಂಟೆಯೊಳಗೆ ಪ್ರತಿಕ್ರಿಯಿಸಬೇಕು. ನಾವು ಪ್ರಚಾರಕ್ಕಾಗಿಯೋ ಅಥವಾ ಇನ್ನಾವುದೋ ಗಿಮಿಕ್ ಗಾಗಿ ಬೆದರಿಕೆ ಒಡ್ಡುತ್ತಿಲ್ಲ ಎಂದು ಇ-ಮೇಲ್ ಸಂದೇಶದಲ್ಲಿ ಎಚ್ಚರಿಕೆ ನೀಡಲಾಗಿದೆ.
ಅಂಬೋಲಿ ಪೊಲೀಸರು ತನಿಖೆ ಆರಂಭಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಮೇಲ್ ಪಾಕಿಸ್ತಾನದಿಂದ ಬಂದಿದ್ದು, ಭದ್ರತಾ ವ್ಯವಸ್ಥೆ ಕುರಿತು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.