ಹೈದರಾಬಾದ್: ಗೇಮ್ ಚೇಂಜರ್ ನಿರ್ಮಾಪಕ ಮತ್ತು ತೆಲಂಗಾಣ ಚಲನಚಿತ್ರ ಅಭಿವೃದ್ಧಿ ನಿಗಮ (ಎಫ್ಡಿಸಿ) ಅಧ್ಯಕ್ಷ ದಿಲ್ ರಾಜು ಹಾಗೂ ಪುಷ್ಪ ಸಿನೆಮಾದ ನಿರ್ಮಾಣ ಸಂಶ್ತೆ ಮೈತ್ರಿ ಮೂವಿ ಮೇಕರ್ಸ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಎರಡೂ ಸಿನಿಮಾಗಳಿಂದ ಗಳಿಕೆಯಾದ ಹಣ ಮತ್ತು ಐಟಿ ರಿಟರ್ನ್ಸ್ ನಡುವಿನ ವ್ಯತ್ಯಾಸಗಳ ಕುರಿತು ಪ್ರಾಥಮಿಕ ಮಾಹಿತಿಯ ಆಧಾರದ ಮೇಲೆ ಐಟಿ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ.
ದಿಲ್ ರಾಜು ಮತ್ತು ಮೈತ್ರಿ ಮೂವಿ ಮೇಕರ್ಸ್ ಮುಖ್ಯಸ್ಥರಾದ ನವೀನ್ ಯೆರ್ನೇನಿ, ಯಲಮಂಚಿಲಿ ರವಿಶಂಕರ್ ಅವರಿಗೆ ಸಂಬಂಧಿಸಿದ 8ಕ್ಕೂ ಹೆಚ್ಚು ಸ್ಥಳಗಳನ್ನು ಪರಿಶೀಲಿಸಲು 55ಕ್ಕೂ ಹೆಚ್ಚಿನ ತಂಡಗಳನ್ನು ರಚಿಸಲಾಗಿದೆ.
ದಿಲ್ ರಾಜು, ನವೀನ್ ಯೆರ್ನೇನಿ, ರವಿಶಂಕರ್ ಮತ್ತು ಅವರ ಸಂಬಂಧಿಕರಿಗೆ ಸಂಬಂಧಿಸಿದ ಜುಬಿಲಿ ಹಿಲ್ಸ್ ಹಾಗೂ ಬಂಜಾರ ಹಿಲ್ಸ್ ನಲ್ಲಿರುವ ಆಸ್ತಿಪಾಸ್ತಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವರದಿಯಾದ ಹಣಕಾಸಿನ ವ್ಯತ್ಯಾಸಗಳ ಹಿನ್ನೆಲೆ, ದಿಲ್ ರಾಜು ಅವರ ಸಹೋದರ ಶಿರೀಶ್, ಮಗಳು ಹನ್ಶಿತಾ ರೆಡ್ಡಿ ಮತ್ತು ಇತರೆ ಸಂಬಂಧಿಕರ ತನಿಖೆಯೂ ನಡೆಯುತ್ತಿದೆ.
ಸಿನಿಮಾ ನಿರ್ಮಾಣ ವ್ಯವಹಾರ ಮಾತ್ರವಲ್ಲದೇ, ದಿಲ್ ರಾಜು ರಿಯಲ್ ಎಸ್ಟೇಟ್‌ನಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದು, ತನಿಖೆಯ ಭಾಗವಾಗಿ ಅಧಿಕಾರಿಗಳು ಪ್ರತಿ ವಹಿವಾಟನ್ನೂ ಪರಿಶೀಲಿಸುತ್ತಿದ್ದಾರೆ.
ನವೀನ್ ಯೆರ್ನೇನಿ ಮತ್ತು ಯಲಮಂಚಿಲಿ ರವಿಶಂಕರ್ ನೇತೃತ್ವದ ಮೈತ್ರಿ ಮೂವಿ ಮೇಕರ್ಸ್ ಪ್ರೊಡಕ್ಷನ್‌ನ, ಅಲ್ಲು ಅರ್ಜುನ್ ಅಭಿನಯದ ಪುಷ್ಪ 2: ದಿ ರೂಲ್ ಚಿತ್ರದೊಂದಿಗೆ 2024ರಲ್ಲಿ ಭರ್ಜರಿ ಯಶಸ್ಸನ್ನು ಕಂಡಿದೆ.
400ರಿಂದ 500 ಕೋಟಿ ರೂ. ಬಜೆಟ್ಟಲ್ಲಿ ನಿರ್ಮಿಸಲಾದ ಈ ಚಿತ್ರವು ವಿಶ್ವದಾದ್ಯಂತ ೧,೮೦೦ ಕೋಟಿ ರೂಪಾಯಿಗೂ ಹೆಚ್ಚು ಗಳಿಸಿದೆ ಎಂದು ಅನಧಿಕೃತ ಮೂಲಗಳು ತಿಳಿಸಿವೆ.
ವರದಿಗಳ ಪ್ರಕಾರ, ಚಿತ್ರ ಗಳಿಸಿರುವ ಆದಾಯ ಮತ್ತು ಪಾವತಿಸಿದ ತೆರಿಗೆಯಲ್ಲಿ ವ್ಯತ್ಯಾಸವಿದ್ದು, ಇದನ್ನು ಅಧಿಕಾರಿಗಳು ಕಂಡುಕೊಂಡಿದ್ದಾರೆ. ಹಾಗಾಗಿ ಈ ದಾಳಿ ನಡೆದಿದೆ ಎಂದು ವರದಿಯಾಗಿದೆ.
ಐಟಿ ದಾಳಿ ಹಿಂದಿನ ಕಾರಣ ಅಸ್ಪಷ್ಟವಾಗಿದ್ದರೂ, ತೆಲುಗು ಚಿತ್ರರಂಗದ ಪ್ರಮುಖ ನಿರ್ಮಾಪಕರು ಮತ್ತು ನಿರ್ಮಾಣ ಸಂಸ್ಥೆಗಳ ಸಂಭವನೀಯ ಹಣಕಾಸಿನ ಅಕ್ರಮದ ಬಗ್ಗೆ ಸುಳಿವು ನೀಡಿದೆ.