ಬೆಂಗಳೂರು :ಜಿಗಣಿಯಲ್ಲಿ ಅಕ್ರಮವಾಗಿ ಪೊಲೀಸರಿಗೆ ಸಿಕ್ಕಿಬಿದ್ದಿರುವ ಪಾಕಿಸ್ತಾನ ಪ್ರಜೆಗಳು ಯೂಟ್ಯೂಬ್ ಚಾನೆಲ್ನಲ್ಲಿ ಧರ್ಮ ಪ್ರಚಾರ ಮಾಡುತ್ತಿರುವುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.
ಬಂಧಿತ ಆರೋಪಿಗಳ ತನಿಖೆಯನ್ನು ಪೊಲೀಸರು ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಆರೋಪಿಗಳ ಕುಕೃತ್ಯ ಬಯಲಾಗಿದೆ.
22 ಮಂದಿ ಬಂಧಿತ ಆರೋಪಿಗಳ ವಿರುದ್ಧ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 12 ಮಂದಿ ಆರೋಪಿಗಳ ಒಂದು ಪ್ರಕರಣದ ತನಿಖೆ ಪೂರ್ಣಗೊಳಿಸಿ 1ಸಾವಿರ ಪುಟಗಳ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ.ದೋಷಾರೋಪ ಪಟ್ಟಿಯಲ್ಲಿ ಹಲವು ವಿಚಾರಗಳು ಉಲ್ಲೇಖವಾಗಿವೆ.
ಪ್ರಕರಣದ ಪ್ರಮುಖ ಆರೋಪಿ ರಶೀದ್ ಅಲಿ ಸಿದ್ದಿಕ್ಕಿ ಪಾಕಿಸ್ತಾನ ಮೂಲದವನೆಂದು ಎಂದು ಸಾಬೀತಾಗಿದೆ.
ಆರೋಪಿ ರಶೀದ್ ಅಲಿ ಸಿದ್ದಿಕ್ಕಿ ಬಳಿ ಪಾಕಿಸ್ತಾನದ ಶಾಶ್ವತ ನಿವಾಸ ಪ್ರಮಾಣಪತ್ರ ಪತ್ತೆಯಾಗಿದೆ. 12 ಮಂದಿ ಆರೋಪಿಗಳಲ್ಲಿ ಎಂಟು ಮಂದಿ ಪುರುಷರು, ಮೂವರು ಮಹಿಳೆಯರು ಮತ್ತು ಓರ್ವ ಬಾಲಕಿ ಇದ್ದಾಳೆ. ಈ ಎಲ್ಲರೂ ಅಕ್ರಮವಾಗಿ ಭಾರತಕ್ಕೆ ಬಂದಿದ್ದಾರೆ.
ಪಾಕಿಸ್ತಾನ ನಿವಾಸಿಗಳು 22 ಮಂದಿಯನ್ನು ಬಹಿಷ್ಕರಿಸಿದ್ದರು. ಬಳಿಕ ಆರೋಪಿಗಳು ಪಾಕಿಸ್ತಾನ ತೊರೆದು ಭಾರತದ ಕಡೆ ಮುಖ ಮಾಡಿದ್ದರು. ವೀಸಾ, ಪಾಸ್ ಪೋರ್ಟ್ ಇಲ್ಲದಂತೆ ಅಕ್ರಮವಾಗಿ ಭಾರತದೊಳಗೆ ನುಸುಳಿದರು. ದೆಹಲಿಯಲ್ಲಿ ನಕಲಿ ಜನನ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಮಾಡಿಕೊಂಡಿದ್ದಾರೆ. ಅಲ್ಲದೇ ಭಾರತದ ಪಾಸ್ ಪೋರ್ಟ್ ಸಹ ಮಾಡಿಕೊಂಡಿದ್ದಾರೆ.
ಮುಸ್ಲಿಂ ಹೆಸರುಗಳನ್ನು ಹಿಂದೂಗಳ ಹೆಸರುಗಳನ್ನಾಗಿ ಬದಲಿಸಿಕೊಂಡು, ದೆಹಲಿ, ಬೆಂಗಳೂರು, ಹೈದರಾಬಾದ್ ಸೇರಿ ಹಲವೆಡೆ ವಾಸವಾಗಿದ್ದರು. ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ರಾಜ್ಯಕ್ಕೆ ಬಂದಿದ್ದ ಪಾಕಿಸ್ತಾನ ಪ್ರಜೆಗಳು ದಾವಣಗೆರೆ ನಂತರ ನಗರಕ್ಕೆ ಬಂದು ನೆಲೆಸಿದ್ದಾರೆ.
ಆನೇಕಲ್ ಸಮೀಪದ ಜಿಗಣಿ ಹಾಗೂ ಪೀಣ್ಯದಲ್ಲಿ ನೆಲೆಸಿದ್ದ ಆರೋಪಿಗಳು, ಯೂಟ್ಯೂಬ್ ಚಾನೆಲ್ನಲ್ಲಿ ಧರ್ಮ ಬೋಧನೆ ಮಾಡುತ್ತಿದ್ದರು. ತಮ್ಮದೇ ಯೂಟ್ಯೂಬ್ ತೆರೆದು ಅದರಲ್ಲಿ ಧರ್ಮ ಪ್ರಚೋದನೆಯಲ್ಲಿ ತೊಡಗಿದ್ದರು. ಆರೋಪಿಗಳೆಲ್ಲರೂ ಮೆಹದಿ ಫೌಂಡೇಶನ್ನ ಸದಸ್ಯರಾಗಿದ್ದಾರೆ ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಇವೆಲ್ಲ ಅಂಶಗಳ ಮೇಲೆ ತನಿಖೆ ನಡೆಸಿದ್ದ ಪೊಲೀಸರು ಸೂಕ್ತ ಸಾಕ್ಷ್ಯಗಳನ್ನ ಕಲೆ ಹಾಕಿದ್ದಾರೆ. ಪಾಕಿಸ್ತಾನ ಪ್ರಜೆಗಳು ಸೇರಿದಂತೆ ಹಲವು ಮಂದಿಯ ಹೇಳಿಕೆ ದಾಖಲು ಮಾಡಿದ್ದಾರೆ. ತಾಂತ್ರಿಕ ಸಾಕ್ಷ್ಯಗಳು, ಸಿಡಿಆರ್ ರಿಪೋರ್ಟ್ ಟವರ್ ಡಂಟ್ ಮತ್ತು ಯೂಟ್ಯೂಬ್ ಚಾನೆಲ್ ವಿವರನ್ನು ಕಲೆ ಹಾಕಿದ್ದಾರೆ. ಹಾಗೇ, ಬಂಧಿತ ಆರೋಪಿಗಳ ಬಳಿ ಇದ್ದ ಮೊಬೈಲ್ನಲ್ಲಿನ ಆಡಿಯೋ ಮತ್ತು ವಿಡಿಯೋವನ್ನು ಸಂಗ್ರಹಿಸಿದ್ದಾರೆ.



