ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಯಶಸ್ವಿಯಾಗಿ ಜಂಬೂಸವಾರಿ ನಡೆಸಿದ ಅಭಿಮನ್ಯು ನೇತೃತ್ವದ ಗಜಪಡೆಗೆ ಇಂದು ಅರಮನೆ ಆವರಣದಲ್ಲಿ ಪೂಜೆ ಸಲ್ಲಿಸುವ ಮೂಲಕ ಸಾಂಪ್ರದಾಯಿಕವಾಗಿ ಬೀಳ್ಕೊಡುಗೆ ನೀಡಲಾಯಿತು.
14 ಆನೆಗಳು ಮತ್ತು ಮಾವುತರು, ಕಾವಾಡಿಗರನ್ನು ಕೋಡಿ ಸೋಮೇಶ್ವರ ದೇವಾಲಯದ ಬಳಿ ಭಾನುವಾರ ಅರಣ್ಯ ಇಲಾಖೆ ಬೀಳ್ಕೊಟ್ಟಿತು. ಆನೆಗಳನ್ನು ನೋಡಲು ಸೇರಿದ್ದ ಜನರು ಫೋಟೋ, ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಆನೆಗಳು ನಿರ್ಗಮಿಸುತ್ತಿರುವುದನ್ನು ನೋಡುತ್ತಾ ಭಾವುಕರಾದರು.
ಕಳೆದ 60 ದಿನಗಳಿಂದಲೂ ಗಜಪಯಣದ ಮೂಲಕ ಎರಡು ಹಂತಗಳಲ್ಲಿ ಆಗಮಿಸುವ ಆನೆಗಳು ಕೋಡಿ ಸೋಮೇಶ್ವರ ದೇವಾಲಯದ ಆವರಣದಲ್ಲಿ ವಾಸ್ತವ್ಯ ಹೂಡುತ್ತವೆ. ಪ್ರತಿನಿತ್ಯ ಅರಮನೆಯಿಂದ ಬನ್ನಿ ಮಂಟಪದವರೆಗೂ ತಾಲೀಮಿನಲ್ಲಿ ಭಾಗವಹಿಸುತ್ತವೆ. ಈ ಅಭ್ಯಾಸದ ಜೊತೆಗೆ ಮರದ ಅಂಬಾರಿ ಹೊರುವ ತಾಲೀಮು, ಸಿಡಿಮದ್ದು ಸಿಡಿಸುವ ತಾಲೀಮು ಹಾಗು ಆನೆಗಳ ತೂಕ ಪರಿಶೀಲನೆಗಳೆಲ್ಲ ನಡೆಯುತ್ತವೆ.
ಪ್ರತಿದಿನ ಅರಮನೆಯಿಂದ-ಬನ್ನಿಮಂಟಪದವರೆಗೆ ಸಾಗುವ ಮಾರ್ಗದಲ್ಲಿ ಗಜಪಡೆಯನ್ನು ನೋಡಲು ಜನರು ಕಿಕ್ಕಿರಿದು ಸೇರುತ್ತಿದ್ದರು. ಈ ಸಂದರ್ಭದಲ್ಲಿ ಆನೆಗಳ ಫೋಟೋ, ವಿಡಿಯೋ ಚಿತ್ರೀಕರಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದರು.
“ಈ ಬಾರಿ ಅದ್ಧೂರಿಯಾಗಿ ದಸರಾ ನಡೆದಿದೆ. 14 ಆನೆಗಳು ಮರಳಿ ತಮ್ಮ ಕ್ಯಾಂಪ್ಗಳಿಗೆ ಹೊರಟಿವೆ. ಸಂಜೆ 5 ಗಂಟೆಯ ವೇಳೆಗೆ ತಮ್ಮ ಶಿಬಿರ ತಲುಪುತ್ತವೆ. ಎಲ್ಲ ಆನೆಗಳೂ ಆರೋಗ್ಯವಾಗಿದೆ. ಈ ಬಾರಿ 14 ಆನೆಗಳು ಮೆರವಣಿಗೆಯಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು” ಎಂದು ಡಿಸಿಎಫ್ ಪ್ರಭು ಗೌಡ ಹೇಳಿದರು.
ಕಳೆದ ಹಲವು ವರ್ಷಗಳಿಂದ ಆನೆಗಳಿಗೆ ಪೂಜೆ ಮಾಡುತ್ತಿರುವ ಅರ್ಚಕ ಪ್ರಹ್ಲಾದ್ ರಾವ್ ಅವರು ಮಾತನಾಡಿ, “ಅಭಿಮನ್ಯು ನೇತೃತ್ವದ ಗಜಪಡೆ ಜಂಬೂಸವಾರಿಯನ್ನು ಯಶಸ್ವಿಯಾಗಿ ನಡೆಸಿಕೊಟ್ಟಿವೆ. ಕಳೆದ ಎರಡು ತಿಂಗಳು ಈ ಆನೆಗಳು ಪ್ರತಿನಿತ್ಯ ಮೈಸೂರಿನ ನಗರದಲ್ಲಿ ಜನರಿಗೆ ದರ್ಶನ ನೀಡಿದವು. ಇಲ್ಲಿನ ಜನರು ಎರಡು ತಿಂಗಳು ದಸರಾ ಆನೆಯನ್ನು ನೋಡಿರುವುದೇ ಅವರ ಭಾಗ್ಯ” ಎಂದು ತಿಳಿಸಿದರು.
ಈ ಬಾರಿಯ ಜಂಬೂ ಸವಾರಿ ಮೆರವಣಿಗೆಯನ್ನು ಸಾಮಾಜಿಕ ಜಾಲತಾಣದ ಮೂಲಕ 22 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಒಂದು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿರುವುದು ವಿಶೇಷ.
ಅರಮನೆ ಆವರಣದಲ್ಲಿ ಜಂಬೂಸವಾರಿಯ ದಿನ ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿಯ ಮೂರ್ತಿಯನ್ನು ಹೊತ್ತ ಅಭಿಮನ್ಯುವಿನ ನೇತೃತ್ವದಲ್ಲಿ ನಡೆದ ಮೆರವಣಿಗೆಯನ್ನು ಮಾರ್ಗದುದ್ದಕ್ಕೂ ಲಕ್ಷಾಂತರ ಮಂದಿ ಕಣ್ತುಂಬಿಕೊಂಡಿದ್ದಾರೆ.
ದಸರಾದ ಅಧಿಕೃತ ವೆಬ್‌ಸೈಟ್‌ನ ಮೂಲಕ ನೇರವಾಗಿ ಪ್ರಸಾರಗೊಂಡ ಜಂಬೂ ಸವಾರಿಯನ್ನು ವೆಬ್‌ಸೈಟ್‌ನಲ್ಲಿ ನೇರವಾಗಿ ಪ್ರಸಾರ ಮಾಡುವುದರೊಂದಿಗೆ, ಜಿಲ್ಲಾಡಳಿತ ಮತ್ತು ಸಿಎಂ ಅವರ ಅಧಿಕೃತ ಜಾಲತಾಣ ಸೇರಿದಂತೆ ಸರ್ಕಾರದ 22 ಅಧಿಕೃತ ಜಾಲತಾಣಗಳಿಗೂ ಸಂಪರ್ಕ ಕಲ್ಪಿಸಲಾಗಿತ್ತು.



