ಬೈಕ್ ನಲ್ಲಿ ಹೋಗುವಾಗ ಪತ್ನಿ ಆರಂಭಿಸಿದ ಜಗಳದಿಂದ ಬೇಸತ್ತ ಗಂಡ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮೂರು ದಿನಗಳ ನಂತರ ಶವ ಪತ್ತೆಯಾಗಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ದಾಸನಪುರ ಸೇತುವೆಯಲ್ಲಿ ಶುಕ್ರವಾರ ಸಂಜೆ ನಡೆದಿದ್ದು, ಮೂರು ದಿನಗಳ ಶೋಧ ಕಾರ್ಯಾಚರಣೆಯ ಬಳಿಕ ಭಾನುವಾರ ಬೆಳಿಗ್ಗೆ ಕೊಳ್ಳೇಗಾಲ ತಾಲೂಕಿನ ಕಜ್ಜಿಹುಂಡಿ ಗ್ರಾಮದ ನಿವಸಿ ಮಂಜುನಾಥ್(40) ಶವಪತ್ತೆಯಾಗಿದೆ.
ಬೆಳಕವಾಡಿ ಹೊಸಳ್ಳಿ ಗ್ರಾಮದ ರಾಜೇಶ್ವರಿ ಎಂಬವರ ಜೊತೆ ಕಳೆದ 13 ವರ್ಷಗಳ ಹಿಂದೆ ಮಂಜುನಾಥ್ ಮದುವೆಯಾಗಿತ್ತು. ದಂಪತಿಗೆ 10 ಮತ್ತು 5 ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ.
ಕಜ್ಜಿಹುಂಡಿ ಗ್ರಾಮದಿಂದ ಬೈಕ್ನಲ್ಲಿ ಬೆಳಕವಾಡಿಗೆ ಪತ್ನಿ ಜೊತೆಗೆ ಮಂಜುನಾಥ್ ತೆರಳುತ್ತಿದ್ದಾಗ ಇಬ್ಬರ ನಡುವೆ ಆರಂಭವವಾದ ಜಗಳ ಏಕಾಏಕಿ ವಿಕೋಪಕ್ಕೆ ತಿರುಗಿದೆ. ಬೈಕ್ ನಿಲ್ಲಿಸಿದ ಮಂಜುನಾಥ್ ಸೇತುವೆಯಿಂದ ನದಿಗೆ ಹಾರಿದ್ದರು.
ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ಮೂರು ದಿನ ಶೋಧ ಕಾರ್ಯಾಚರಣೆ ಮಾಡಿದ್ದರು. ಆದರೆ ಮಂಜುನಾಥ್ ಅವರ ಕುರುಹು ಕೂಡಾ ಪತ್ತೆಯಾಗಿರಲಿಲ್ಲ. ಇಂದು ಕಾವೇರಿ ನದಿಯಲ್ಲಿ ಶವ ಪತ್ತೆಯಾಗಿದೆ. ಕೊಳ್ಳೇಗಾಲ ಪಟ್ಟಣ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.



