ಬಹು ನಿರೀಕ್ಷಿತ ಹಾಗೂ ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿದ್ದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಕೊನೆಗೂ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಸೋಮವಾರ ಸಂಜೆ ಲೋಕಭವನದಲ್ಲಿ ನಡೆಯಲಿದೆ.
ಹೈಕಮಾಂಡ್ ಹಾಗೂ ರಾಜ್ಯ ನಾಯಕರು ಹಲವು ಸುತ್ತುಗಳ ಮಾತುಕತೆ ನಂತರ ಸಂಪುಟ ವಿಸ್ತರಣೆಗೆ ನಿರ್ಧರಿಸಿದ್ದು, ಸಚಿವ ಸಂಪುಟ ಪಟ್ಟಿಯನ್ನು ಅಳೆದೂ ತೂಗಿ ಅಂತಿಮಗೊಳಿಸಿದೆ. ಈ ಬಾರಿ ಸಂಪುಟದಲ್ಲಿ ಹಲವು ಹಿರಿಯರಿಗೆ ಹಾಗೂ ಪ್ರಬಲರನ್ನು ಸಂಪುಟದಿಂದ ಕೈಬಿಡಲಾಗಿದ್ದು, 8 ಹೊಸಬರಿಗೆ ಅವಕಾಶ ನೀಡಲಾಗಿದೆ. ಅಲ್ಲದೇ ಕಳೆದ ಬಾರಿ ಸಚಿವ ಸಂಪುಟದಲ್ಲಿ ಸ್ಥಾನ ಸಿಗದೇ ನಿರಾಸೆಗೊಂಡಿದ್ದವರಿಗೆ ಅವಕಾಶ ನೀಡಲಾಗಿದೆ.
ನೂತನ ಸಚಿವ ಸಂಪುಟದಲ್ಲಿ ಗಾಯತ್ರಿ ಶಾಂತೇಗೌಡ (ಚಿಕ್ಕಮಗಳೂರು, ಎಂಎಲ್ಸಿ), ಟಿ.ರಘುಮೂರ್ತಿ (ಚಿತ್ರದುರ್ಗ, ಚಳ್ಳಕೆರೆ ಶಾಸಕ), ಕೆ.ಎನ್. ಬಸವಂತಪ್ಪ (ದಾವಣಗೆರೆ, ಮಾಯಕೊಂಡ ಕ್ಷೇತ್ರ), ಎಚ್. ಸಿ.ಬಾಲಕೃಷ್ಣ (ಬೆಂಗಳೂರು ದಕ್ಷಿಣ, ಮಾಗಡಿ ಕ್ಷೇತ್ರ), ಕೆ.ಎಂ. ಶಿವಲಿಂಗೇಗೌಡ (ಹಾಸನ, ಅರಸಿಕೆರೆ ಕ್ಷೇತ್ರ), ಡಾ. ಅಜಯ್ ಧರ್ಮಸಿಂಗ್( ಕಲಬುರಗಿ, ಜೇವರ್ಗಿ ಕ್ಷೇತ್ರ), ರಿಜ್ವಾನ್ ಅರ್ಷದ್ ( ಬೆಂಗಳೂರು ನಗರ, ಶಿವಾಜಿನಗರ ಕ್ಷೇತ್ರ), ವಿಜಯಾನಂದ ಕಾಶಪ್ಪನವರ ( ಬಾಗಲಕೋಟೆ, ಹುನಗುಂದ ಕ್ಷೇತ್ರ) ಸ್ಥಾನ ಪಡೆದ ಹೊಸ ಮುಖಗಳಾಗಿವೆ. ಮೈಸೂರಿನ ತನ್ವೀರ್ ಸೇಠ್, ಪ್ರದೀಪ್ ಈಶ್ವರ್, ಬೇಲೂರು ಗೋಪಾಲಕೃಷ್ಣ ಮುಂತಾದ ಹೊಸಬರಿಗೆ ಅವಕಾಶ ಕೈ ತಪ್ಪಿದೆ.
ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಗದಗ ಜಿಲ್ಲೆಯ ರೋಣ ಕ್ಷೇತ್ರದಜಿ.ಎಸ್. ಪಾಟೀಲ ಅವರಿಗೆ ವಿಧಾನಸಭೆ ಸ್ಪೀಕರ್ ಸ್ಥಾನ ಒಲಿದರೆ, ಉಪಸಭಾಧ್ಯಕ್ಷ ಸ್ಥಾನ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರಿಗೆ ಲಭಿಸಿದೆ. ವಿಧಾನಪರಿಷತ್ ಸಭಾಪತಿ ಆಗಿ ಸಲೀಂ ಅಹ್ಮದ್ ಹಾಗೂ ಮೇಲ್ಮನೆ ಸದಸ್ಯೆ ಹಾಗೂ ಮಾಜಿ ಶಾಸಕಿ ಉಮಾಶ್ರೀ ಅವರಿಗೆ ವಿಧಾನಪರಿಷತ್ ಉಪಸಭಾಪತಿ ಸ್ಥಾನ ಲಭಿಸಿರುವುದು ಅಚ್ಚರಿ ಆಗಿದೆ.
ಸಿದ್ದರಾಮಯ್ಯ ಸರ್ಕಾರದಲ್ಲಿ ಪ್ರಭಾವಿ ಮಂತ್ರಿಗಳಾಗಿದ್ದ ಜಮೀರ್ ಅಹ್ಮದ್, ದಿನೇಶ್ ಗುಂಡೂರಾವ್, ಲಕ್ಷ್ಮೀ ಹೆಬ್ಬಾಳ್ಕರ್, ಎಚ್.ಕೆ. ಪಾಟೀಲ್, ಎಚ್.ಸಿ. ಮಹದೇವಪ್ಪ, ರಹೀಂಖಾನ್, ಶಿವಾನಂದ ಪಾಟೀಲ್, ಚಲುವರಾಯ ಸ್ವಾಮಿ ಅವರನ್ನು ಸಂಪುಟದಿಂದ ಕೈಬಿಡಲಾಗಿದೆ.



