ಪೂರ್ವ ಮುಂಗಾರು ಅಬ್ಬರಿಸಿದರೂ ಮುಂಗಾರು ಸ್ವಲ್ಪ ತಡವಾಗಿ ಮಲೆನಾಡಿನಲ್ಲಿ ಪ್ರಾರಂಭವಾಗಿದೆ. ರಾಜ್ಯದಲ್ಲಿಯೇ ಪ್ರಥಮವಾಗಿ ತುಂಬುವ ಡ್ಯಾಂ ಎಂದೆನಿಸಿಕೊಂಡಿರುವ ಶಿವಮೊಗ್ಗ ತಾಲೂಕಿನ ಗಾಜನೂರು ಡ್ಯಾಂ ಭರ್ತಿಯಾಗಿದೆ.
4 ವರ್ಷಗಳ ನಂತರ ಭರ್ತಿಯಾದ ಡ್ಯಾಂನಿಂದ ಗುರುವಾರ ನದಿಗೆ ಎರಡು ಕ್ರಸ್ಟ್ ಗೇಟ್ಗಳ ಮೂಲಕ 1 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ತುಂಗಾ ಅಣೆಕಟ್ಟೆಗೆ ಒಳ ಹರಿವು 6 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇದರಿಂದ ನದಿಗೆ ಎರಡು ಕ್ರಸ್ಟ್ ಗೇಟ್ ಮೂಲಕ 1 ಸಾವಿರ ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ.
ವಿದ್ಯುತ್ ಉತ್ಪಾದನೆಗಾಗಿ 5 ಸಾವಿರ ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ. ಇದರಿಂದ ನದಿಗೆ ಒಟ್ಟು 6 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ.
ತುಂಗಾ ಅಣೆಕಟ್ಟೆಯು 3.24 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯವನ್ನು ಹೊಂದಿದೆ. ಅಣೆಕಟ್ಟೆಯು ಒಟ್ಟು 588.24 ಮೀಟರ್ ಎತ್ತರವಿದೆ. ಅಣೆಕಟ್ಟು ಸಂಪೂರ್ಣ ತುಂಬಿದೆ. ಇದರಿಂದ ನದಿಗೆ ನೀರು ಬಿಡುಗಡೆ ಮಾಡಲಾಗುತ್ತಿದೆ. ಇಂದು ತುಂಗಾ ಮೇಲ್ದಂಡೆ ಯೋಜನೆಯ ಇಇ ಕೃಷ್ಣ ಪ್ರಸಾದ್ ನೇತೃತ್ವದಲ್ಲಿ ತುಂಗಾ ದೇವಿ ಮೂರ್ತಿಗೆ ಪೂಜೆ ಸಲ್ಲಿಸಿ, ಡ್ಯಾಂನಿಂದ ನದಿಗೆ ನೀರು ಬಿಡಲಾಯಿತು. ಕಳೆದ ನಾಲ್ಕು ವರ್ಷದಲ್ಲಿ ಇದೇ ಮೊದಲ ಬಾರಿ ಜೂನ್ನಲ್ಲಿ ಡ್ಯಾಂ ಭರ್ತಿಯಾಗಿದೆ. ಈ ನೀರು ಮುಂದೆ ಹೊಸಪೇಟೆ ಡ್ಯಾಂಗೆ ಹೋಗುತ್ತದೆ.