ಮಿಜೊರಾಂ ಮಾಜಿ ರಾಜ್ಯಪಾಲ ಹಾಗೂ ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಪತಿ ಸ್ವರಾಜ್ ಖುಷಾಲ್ ನಿಧನರಾಗಿದ್ದಾರೆ. ಅವರಿಗೆ 73 ವರ್ಷ ವಯಸ್ಸಾಗಿತ್ತು.
ಬಿಜೆಪಿ ಸಂಸದ ಹಾಗೂ ಸ್ವರಾಜ್ ಖುಷಾಲ್ ಅವರ ಪುತ್ರ ಬನ್ಸೂರಿ ಸ್ವರಾಜ್ ಶುಕ್ರವಾರ ಈ ವಿಷಯ ಪ್ರಕಟಿಸಿದ್ದಾರೆ.
ಹಿರಿಯ ವಕೀಲರೂ ಆಗಿದ್ದ ಸ್ವರಾಜ್ ಖುಷಾಲ್ ಅವರ ನಿಧನಕ್ಕೆ ಹಿರಿಯ ರಾಜಕಾರಣಿಗಳು ಹಾಗೂ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.
ಗುರುವಾರ ಸಂಜೆ ದೆಹಲಿಯ ಲೋಧಿ ರಸ್ತೆಯಲ್ಲಿರುವ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
1952 ಜುಲೈ 12ರಂದು ಜನಿಸಿದ ಸ್ವರಾಜ್ ದೆಹಲಿ ಮತ್ತು ಚಂಡೀಘಢದಲ್ಲಿ ಕ್ರಿಮಿನಲ್ ವಕೀಲರಾಗಿ ಜನಪ್ರಿಯರಾಗಿದ್ದರು. 1990ರಿಂದ 1993ರ ಅವಧಿಯಲ್ಲಿ ಮಿಜೋರಾಂ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸಿದ್ದರು. ಹರಿಯಾಣ ವಿಕಾಸ ಪಾರ್ಟಿಯಿಂದ 1998ರಿಂದ 2004ರವರೆಗೆ ಸಂಸದರಾಗಿ ಸೇವೆ ಸಲ್ಲಿಸಿದ್ದರು.
1975ರಲ್ಲಿ ಸುಷ್ಮಾ ಸ್ವರಾಜ್ ಅವರನ್ನು ಸ್ವರಾಜ್ ವಿವಾಹವಾಗಿದ್ದರು. 1975-1977ರ ನಂತರ ಅವರು ಮಾಜಿ ಕೇಂದ್ರ ಸಚಿವ ಜಾರ್ಜ್ ಫೆರ್ನಾಂಡೀಸ್ ಜೊತೆ ಸಮಾಜವಾದದಲ್ಲಿ ಗುರುತಿಸಿಕೊಂಡಿದ್ದು ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ನಡೆಸಿದ್ದರು.



