ಆರಂಭಿಕ ಶುಭಮನ್ ಗಿಲ್ ಸಿಡಿಸಿದ ಶತಕ ಹಾಗೂ ಕೊಹ್ಲಿ ಮತ್ತು ಅಯ್ಯರ್ ದಾಖಲಿಸಿದ ಅರ್ಧಶತಕಗಳ ಸಹಾಯದಿಂದ ಭಾರತ ತಂಡ ೩ನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 356 ರನ್ ಗಳ ಬೃಹತ್ ಮೊತ್ತ ಪೇರಿಸಿದೆ.
ಅಹಮದಾಬಾದ್ ನಲ್ಲಿ ಬುಧವಾರ ನಡೆದ ಏಕದಿನ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಭಾರತ ತಂಡ 50 ಓವರ್ ಗಳಲ್ಲಿ 356 ರನ್ ಗೆ ಆಲೌಟಾಗಿದೆ.
ಹಿಂದಿನ ಪಂದ್ಯದಲ್ಲಿ ಶತಕ ಸಿಡಿಸಿದ್ದ ನಾಯಕ ರೋಹಿತ್ ಶರ್ಮ (1) ಬೇಗನೇ ಔಟಾಗಿದ್ದರಿಂದ ತಂಡ ಆರಂಭಿಕ ಆಘಾತಕ್ಕೆ ಒಳಗಾಯಿತು. ಆದರೆ ಗಿಲ್ ಮತ್ತು ಕೊಹ್ಲಿ ಎರಡನೇ ವಿಕೆಟ್ ಜೊತೆಯಾಟದಲ್ಲಿ 116 ರನ್ ಪೇರಿಸಿ ತಂಡವನ್ನು ಹಳಿಗೆ ತಂದು ನಿಲ್ಲಿಸಿದರು.
ರನ್ ಬರ ಎದುರಿಸುತ್ತಿರುವ ವಿರಾಟ್ ಕೊಹ್ಲಿ 55 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 52 ರನ್ ಬಾರಿಸಿ ಔಟಾದರು. ಇದು ಅವರ 73ನೇ ಅರ್ಧಶತಕವಾಗಿದ್ದು, ಲಯ ಕಂಡುಕೊಂಡ ಈ ಹಂತದಲ್ಲಿ ಶತಕ ಗಳಿಸುವ ಅವಕಾಶ ಕಳೆದುಕೊಂಡರು.
ಮತ್ತೊಂದು ತುದಿಯಲ್ಲಿ ಉತ್ತಮವಾಗಿ ಆಡುತ್ತಿದ್ದ ಗಿಲ್ 102 ಎಸೆತಗಳಲ್ಲಿ 14 ಬೌಂಡರಿ ಮತ್ತು 3 ಸಿಕ್ಸರ್ ಒಳಗೊಂಡ 112 ರನ್ ಬಾರಿಸಿ ಸರಣಿಯಲ್ಲಿ ಎರಡನೇ ಶತಕ ಸಿಡಿಸಿದರು. ಅಲ್ಲದೇ ಇದು ಅವರ ವೈಯಕ್ತಿಕ 7ನೇ ಶತಕವಾಗಿದೆ.
ಗಿಲ್ ಅಹಮದಾಬಾದ್ ಮೈದಾನದಲ್ಲಿ ಶತಕ ಸಿಡಿಸುವ ಮೂಲಕ ಒಂದೇ ಕ್ರೀಡಾಂಗಣದಲ್ಲಿ ಮೂರು ಮಾದರಿಗಳಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಹಾಗೂ ವಿಶ್ವದ ಐದನೇ ಬ್ಯಾಟ್ಸ್ ಮನ್ ಎಂಬ ಗೌರವಕ್ಕೆ ಪಾತ್ರರಾದರು.
ಉತ್ತಮ ಲಯದಲ್ಲಿರುವ ಮತ್ತೊಬ್ಬ ಆಟಗಾರ ಶ್ರೇಯಸ್ ಅಯ್ಯರ್ 64 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 78 ರನ್ ಬಾರಿಸಿ ಅರ್ಧಶತಕದ ಗೌರವಕ್ಕೆ ಪಾತ್ರರಾದರು. 5ನೇ ಕ್ರಮಾಂಕದಲ್ಲಿ ಬಡ್ತಿ ಪಡೆದು ಬಂದ ಕೆಎಲ್ ರಾಹುಲ್ 29 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ಸಿಡಿಸಿದ್ದಾಗ ಔಟಾಗಿ ಅರ್ಧಶತಕದಿಂದ ವಂಚಿತರಾದರು.
ಒಂದು ಹಂತದಲ್ಲಿ ಭಾರತ ತಂಡ 38 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 259 ರನ್ ಪೇರಿಸಿ ಭಾರೀ ಮೊತ್ತದತ್ತ ದಾಪುಗಾಲಿರಿಸಿತ್ತು. ಆದರೆ ಸ್ಪಿನ್ನರ ಆದಿಲ್ ರಶೀದ್ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬೆನ್ನೆಲುಬು ಮುರಿದಿದ್ದರಿಂದ ನಾಟಕೀಯ ಕುಸಿತದೊಂದಿಗೆ ರನ್ ವೇಗದಲ್ಲಿ ಕುಸಿತ ಅನುಭವಿಸಿತು. ಆದಿಲ್ ರಶೀದ್ 4 ವಿಕೆಟ್ ಪಡೆದು ಮಿಂಚಿದರೆ, ಮಾರ್ಕ್ ವುಡ್ 2 ವಿಕೆಟ್ ಗಳಿಸಿದರು.



