ನವದೆಹಲಿ: ಸತತವಾಗಿ ಏರಿಕೆ ಆಗುತ್ತಿರುವ ಚಿನ್ನ ಹಾಗೂ ಬೆಳ್ಳಿ ದಾರಣೆ ಮಂಗಳವಾರ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಏರಿದ್ದು, ಇದೇ ರೀತಿ ಮುಂದುವರಿದರೆ ಶೀಘ್ರದಲ್ಲೇ ಕಂಡು ಕೇಳಿಯರದ ಮಟ್ಟಕ್ಕೆ ಏರುವುದು ಖಚಿತವಾಗಿದೆ.
ಚೀನಿವಾರು ಮಾರುಕಟ್ಟೆಯಲ್ಲಿ ಮಂಗಳವಾರ ಮಧ್ಯಾಹ್ನ 2.30ರ ಸುಮಾರಿಗೆ 10 ಗ್ರಾಂ ಚಿನ್ನದ ಬೆಲೆ 1,52,260 ರೂ. ತಲುಪಿದರೆ ಬೆಳ್ಳಿ ಪ್ರತಿ ಕೆಜಿಗೆ 3,27,998 ರೂ. ತಲುಪಿ ದಾಖಲೆ ಬರೆದಿದೆ.
ಜಾಗತಿಕ ಮಾರುಕಟ್ಟೆಗಳಲ್ಲಿ ಎರಡೂ ಲೋಹಗಳ ಬೆಲೆ ಔನ್ಸ್‌ಗೆ ಹೊಸ ಗರಿಷ್ಠ ಮಟ್ಟಕ್ಕೆ ಏರಿತು. ಬೆಳ್ಳಿ ಔನ್ಸ್‌ಗೆ 95.49 ಅಮೆರಿಕನ್ ಡಾಲರ್‌ಗಳನ್ನು ತಲುಪಿತು. ಇದು ಈವರೆಗಿನ ಸಾರ್ವಕಾಲಿಕ ದಾಖಲೆ ಮಟ್ಟವಾಗಿದೆ.
ಅಮೆರಿಕದ ಸುಂಕ ಭೀತಿ ಹಾಗೂ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಜಾಗತಿಕ ಅನಿಶ್ಚಿತತೆ ಮತ್ತು ಸುರಕ್ಷಿತ ಹೂಡಿಕೆಗೆ ಹೆಚ್ಚಾಗಿದೆ. ಇದರಿಂದ ಚಿನ್ನ ಹಾಗೂ ಬೆಳ್ಳಿ ಬೆಲೆ ಗಗನ ಮುಖಿಯಾಗಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.
ಜಾಗತಿಕ ರಾಜಕೀಯ ಉದ್ವಿಗ್ನತೆಗಳು, ಹೆಚ್ಚುತ್ತಿರುವ ವ್ಯಾಪಾರ – ಯುದ್ಧದ ಭೀತಿ ಮತ್ತು ತೀಕ್ಷ್ಣವಾದ ಕರೆನ್ಸಿ ಚಲನೆಗಳು ಜಾಗತಿಕ ಮತ್ತು ದೇಶೀಯ ಮಾರುಕಟ್ಟೆಗಳಲ್ಲಿ ಅಮೂಲ್ಯ ಲೋಹಗಳ ಮೇಲೆ ಹೂಡಿಕೆದಾರರ ಆಸಕ್ತಿಯನ್ನು ಹೆಚ್ಚಿಸಿವೆ.
ಬೆಳ್ಳಿ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ: ಪ್ರಸ್ತುತ ವ್ಯಾಪಾರ ಯುದ್ಧ ಮತ್ತು ಜಾಗತಿಕ ಅನಿಶ್ಚಿತತೆಯ ಮಧ್ಯೆ ಚಿನ್ನದ ಬೆಲೆಗಳು ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಅಖಿಲ ಭಾರತ ರತ್ನ ಮತ್ತು ಆಭರಣ ದೇಶೀಯ ಮಂಡಳಿ (GJC) ಅಧ್ಯಕ್ಷ ರಾಜೇಶ್ ರೋಕ್ಡೆ ETV ಭಾರತ್‌ಗೆ ತಿಳಿಸಿದ್ದಾರೆ. ಬೆಳ್ಳಿಯ ಕೈಗಾರಿಕಾ ಬಳಕೆ ಗಮನಾರ್ಹವಾಗಿ ಹೆಚ್ಚಿರುವುದರಿಂದ ಅದು ಇನ್ನೂ ಹೆಚ್ಚಿನ ಏರಿಕೆ ಕಾಣುವ ಸಾಧ್ಯತೆಗಳಿವೆ ಎಂದು ಅವರು ಹೇಳಿದ್ದಾರೆ.
2 ಲಕ್ಷ ರೂ ದಾಟುವುದೇ ಚಿನ್ನದ ದರ?
ಈ ವರ್ಷ ಚಿನ್ನದ ಬೆಲೆ 2 ಲಕ್ಷ ರೂಪಾಯಿಗಳನ್ನು ದಾಟಲಿದೆ ಮತ್ತು ಮುಂದಿನ ಮೂರು ವರ್ಷಗಳಲ್ಲಿ 3 ಲಕ್ಷ ರೂ.ಗಳನ್ನು ತಲುಪಬಹುದು ಎಂದು ರೋಕ್ಡೆ ಭವಿಷ್ಯ ನುಡಿದಿದ್ದಾರೆ.
ಬೆಲೆಗಳು ಈ ಮಟ್ಟವನ್ನು ಮೀರಿ ಮುಂದೆ ಸಾಗಬಹುದು ಎಂದು ಅವರು ಭವಿಷ್ಯ ನುಡಿದಿದ್ದಾರೆ. ಹೂಡಿಕೆ ಉದ್ದೇಶಗಳಿಗಾಗಿ ಚಿನ್ನವನ್ನು ಖರೀದಿಸುವಾಗ ಸಂಭವನೀಯ 10-15 ಪ್ರತಿಶತ ತಿದ್ದುಪಡಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಮುಂದುವರಿಯಬೇಕು ಎಂದು ಖರೀದಿದಾರರಿಗೆ ರೋಕ್ಡೆ ಸಲಹೆ ನೀಡಿದ್ದಾರೆ.
ಬೆಳ್ಳಿ ಪ್ರತಿ ಕಿಲೋಗೆ 3,27,000 ರೂ.ಗಳನ್ನು ದಾಟಿದೆ. ಬೆಳ್ಳಿ ಸಹ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ. ಬಹುಶಃ 3,50,000 ರೂ. ಮತ್ತು ಚಿನ್ನವು ಶೀಘ್ರದಲ್ಲೇ 1,65,000 ರೂ. ಮಟ್ಟವನ್ನು ಮುಟ್ಟುವ ಸಾಧ್ಯತೆಯಿದೆ ಎಂದು ಖ್ಯಾತ ಸರಕು ಮಾರುಕಟ್ಟೆ ತಜ್ಞ ಅನುಜ್ ಗುಪ್ತಾ ಭವಿಷ್ಯ ನುಡಿದಿದ್ದಾರೆ.



