ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಬಿ ಖಾತಾ ಹೊಂದಿದವರು ಎ ಖಾತಾ ಆಗಿ ದಾಖಲೆ ಬದಲಾವಣೆ ಮಾಡಿಕೊಳ್ಳಲು ರಾಜ್ಯ ಸರ್ಕಾರ ಬೆಂಗಳೂರಿನ ನಿವೇಶನ ಮಾಲೀಕರಿಗೆ 100 ದಿನಗಳ ಅವಕಾಶ ನೀಡಿದೆ.
ಬೆಂಗಳೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಡಿಸಿಎಂ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್, ನವೆಂಬರ್ 1ರಂದು ಬಿ ಖಾತಾವನ್ನು ಎ ಖಾತಾವಾಗಿ ಬದಲಾವಣೆ ಮಾಡಿಕೊಳ್ಳಲು ಸಹಾಯ ಕೇಂದ್ರಗಳನ್ನು ತೆರೆಯಲಾಗುವುದು ಎಂದರು.
ಬಿಖಾತಾದಿಂದ ಎ ಖಾತಾಗೆ ಪರಿವರ್ತನೆ ಮತ್ತು ಹೊಸ ನಿವೇಶನಗಳಿಗೂ ಎ ಖಾತೆ ಲಭ್ಯವಾಗುವಂತೆ ಆನ್ ಲೈನ್ ವ್ಯವಸ್ಥೆ ಜಾರಿಗೊಳ್ಳುತ್ತಿದ್ದು, ಬುಧವಾರ ಸಂಜೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಪೋರ್ಟಲ್ ಗೆ ಅಧಿಕೃತ ಚಾಲನೆ ನೀಡುತ್ತಿದ್ದಾರೆ.
ಬಿ ಖಾತೆಯಿಂದ ಎ ಖಾತೆ ಪರಿವರ್ತನೆ ಮತ್ತು ಎ ಖಾತೆ ಪಡೆಯಲು ನಿವೇಶನದಾರರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ಮೂಲಕ ಎ-ಖಾತೆ ಇಲ್ಲದ ಕಾರಣ ನಿವೇಶನದಾರರು ಎದುರಿಸುತ್ತಿದ್ದ ಹಲವು ಸಂಕಷ್ಟ, ತೊಡಕುಗಳು ನಿವಾರಣೆಯಾಗಲಿದೆ.
ತೆರಿಗೆ ಸಂಗ್ರಹ ಪ್ರಕ್ರಿಯೆಯನ್ನು ಸುಧಾರಿಸಲು ಬಿಬಿಎಂಪಿ ಬೆಂಗಳೂರಿನ ಎಲ್ಲಾ ಕಾನೂನುಬದ್ಧ ಆಸ್ತಿಗಳನ್ನು ತನ್ನ ವ್ಯಾಪ್ತಿಯಲ್ಲಿ ಸೇರಿಸಲು ಒಂದು ರಿಜಿಸ್ಟರ್ ಪರಿಚಯಿಸಿತು. ಈ ರಿಜಿಸ್ಟರ್ಗೆ ಎ-ಖಾತಾ ಎಂದು ಹೆಸರಿಸಲಾಯಿತು. ಅಂತಹ ಆಸ್ತಿಗಳು, ಎಲ್ಲಾ ಕಟ್ಟಡಗಳಿಗೆ ಬೈಲಾಗಳು, ತೆರಿಗೆ ನಿಯಮಗಳು ಮತ್ತು ಸರ್ಕಾರಿ ನಿಯಮಗಳು ಅನ್ವಯಿಸುತ್ತವೆ. ಅದು ಸಂಪೂರ್ಣ ಕಾನೂನುಬದ್ಧ ಆಸ್ತಿಯಾಗಿದೆ.
ಪ್ರತ್ಯೇಕ ರಿಜಿಸ್ಟರ್ ಅರೆ-ಕಾನೂನು ಮತ್ತು ಅಕ್ರಮ ಆಸ್ತಿಗಳನ್ನು ಒಂದೇ ನ್ಯಾಯವ್ಯಾಪ್ತಿಯಲ್ಲಿ ಪಟ್ಟಿ ಮಾಡಿ ಅದನ್ನು ಬಿ -ಖಾತಾ ಎಂದು ಹೆಸರಿಸಲಾಯಿತು. ಅಂತಹ ಆಸ್ತಿಗಳು ಕೆಲವು ಅಥವಾ ಎಲ್ಲಾ ಸ್ಥಳೀಯ ಬೈಲಾಗಳು ಮತ್ತು ನಿಬಂಧನೆಗಳಿಗೆ ಅನುಗುಣವಾಗಿಲ್ಲ.



