Wednesday, June 24, 2026
Google search engine
Homeಕಾನೂನು27 ಲಕ್ಷ ರೂ. ಜೀವನಾಂಶ ಪಡೆದರೂ ವಿಚ್ಚೇದನಕ್ಕೆ ತಕರಾರು: ಪತ್ನಿಗೆ 10,000 ರೂ. ದಂಡ ವಿಧಿಸಿದ...

27 ಲಕ್ಷ ರೂ. ಜೀವನಾಂಶ ಪಡೆದರೂ ವಿಚ್ಚೇದನಕ್ಕೆ ತಕರಾರು: ಪತ್ನಿಗೆ 10,000 ರೂ. ದಂಡ ವಿಧಿಸಿದ ಹೈಕೋರ್ಟ್‌

ಬೆಂಗಳೂರು: 27 ಲಕ್ಷ ರೂ ಜೀವನಾಂಶ ಪಡೆದರೂ ವಿಚ್ಚೇದನ ಅರ್ಜಿ ಇತ್ಯರ್ಥಕ್ಕೆ ಅವಕಾಶ ನೀಡದೇ ಸತಾಯಿಸುತ್ತಿದ್ದ ಪತ್ನಿಗೆ ಕರ್ನಾಟಕ ಉಚ್ಛ ನ್ಯಾಯಾಲಯ 10 ಸಾವಿರ ರೂ. ದಂಡ ವಿಧಿಸಿದೆ.

ವಿಚ್ಛೇದನ ಕೋರಿ ಪತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಮುಂದೂಡಲು, ಮರು ಪಾಟಿಸವಾಲು ಮಾಡಲು ಕೋರಿ ಮಧ್ಯಂತರ ಅರ್ಜಿಗಳ ಮೂಲಕ 27 ಲಕ್ಷ ರೂ ಜೀವನಾಂಶ ಪಡೆದಿದ್ದ ಪತ್ನಿ ೫ ವರ್ಷ ಕಳೆದರೂ ಪ್ರಕರಣ ಇತ್ಯರ್ಥಕ್ಕೆ ಅವಕಾಶ ನೀಡದ ಕಾರಣ ನ್ಯಾಯಾಲಯ ನ್ಯಾಯಾಲಯದ ಸಮಯ ವ್ಯರ್ಥ ಮಾಡಿದ್ದಕ್ಕಾಗಿ 10 ಸಾವಿರ ರೂ ದಂಡ ವಿಧಿಸಿ ಆದೇಶಿಸಿದೆ.

ದಂಡದ ಮೊತ್ತವನ್ನು ಆದೇಶದ ಮೂರು ವಾರಗಳಲ್ಲಿ ಸೈನಿಕರ ಕಲ್ಯಾಣ ನಿಧಿಗೆ ಪಾವತಿಸಬೇಕು. ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕೌಟುಂಬಿಕ ನ್ಯಾಯಾಲಯಕ್ಕೆ ಸಲ್ಲಿಸಿದ ಬಳಿಕವೇ, ಅರ್ಜಿದಾರರ ಮಧ್ಯಂತರ ಮನವಿಯ ವಿಚಾರಣೆ ಪ್ರಕ್ರಿಯೆ ಮುಂದುವರೆಸಲು ಅವಕಾಶ ನೀಡಬೇಕು ಎಂದು ವಿಚಾರಣಾ ನ್ಯಾಯಾಲಯಕ್ಕೆ ಸೂಚಿಸಿದೆ.

ವಿಚಾರಣೆ ಮುಂದೂಡುವಂತೆ ಹಲವು ಬಾರಿ ಮನವಿ ಮಾಡಿದ್ದಲ್ಲದೇ ಪ್ರಕರಣದ ಸಾಕ್ಷಿದಾರರನ್ನು ಪಾಟಿ ಸವಾಲು ಮಾಡಲು ಕೋರಿ ಸಲ್ಲಿಸಿರುವ ಅರ್ಜಿಯ ವಜಾಗೊಳಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ, ಬೆಂಗಳೂರಿನ ಕನಕಪುರ ಮೂಲದ ಮಹಿಳೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಾ. ಚಿಲಕೂರು ಸುಮಲತಾ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಪ್ರಕರಣ ಸಂಬಂಧ ದಾಖಲೆಗಳು ಮತ್ತು ವಾದ – ಪ್ರತಿವಾದ ಆಲಿಸಿದ ಬಳಿಕ, ಮಹಿಳೆಯೊಬ್ಬರು ಮಧ್ಯಂತರ ಅರ್ಜಿಗಳನ್ನು ಸಲ್ಲಿಸಿದ್ದಾರೆ ಎಂಬ ಕಾರಣದಿಂದ ಕೌಟುಂಬಿಕ ನ್ಯಾಯಾಲಯ ಅಥವಾ ಹೈಕೋರ್ಟ್‌ ವಿಚಾರಣೆಯನ್ನು ಸತತವಾಗಿ ಮುಂದೂಡಿದೆ. ವಿಚಾರಣೆಯನ್ನು ಇನ್ನೂ ಮುಂದೂಡುವ ಉದಾರ ನೀತಿ ಅನುಸರಿಸಲು ಸಾಧ್ಯವಿಲ್ಲ. ನ್ಯಾಯಾಲಯಗಳ ಪ್ರಕ್ರಿಯೆನ್ನು ಕಕ್ಷಿದಾರರ ಇಚ್ಚೆಗನುಗುಣವಾಗಿ ನಡೆಸುವುದಕ್ಕೆ ಸಾಧ್ಯವಿಲ್ಲ. ಜತೆಗೆ, ಕೌಟುಂಬಿಕ ನ್ಯಾಯಾಲಯಗಳ ಕಾಯಿದೆ ಮತ್ತು ಸಿವಿಲ್‌ ಪ್ರಕ್ರಿಯಾ ಸಂಹಿತೆ(ಸಿಪಿಸಿ) ವಿಚಾರಣೆಯನ್ನು ಅಡ್ಡಿ ಪಡಿಸುವುದು, ಪ್ರತಿ ಪಕ್ಷಗಾರ ಮತ್ತು ನ್ಯಾಯಾಲಯಗಳಿಗೆ ಅನಾನುಕೂಲವನ್ನುಂಟು ಮಾಡಲು ಸಹಕಾರಿಯಾಗಬಾರದು ಎಂದು ಪೀಠ ತಿಳಿಸಿದೆ.

ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಈ ಪ್ರಕರಣದಂತೆ ವಿಚಾರಣೆ ನಡೆದಲ್ಲಿ ಒಂದು ದಶಕದಲ್ಲಿ ಯಾವುದೇ ಪ್ರಕರಣವನ್ನು ಇತ್ಯರ್ಥ ಪಡಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಅರ್ಜಿದಾರರ ನಡೆ ಕಾನೂನಿನ ನಿಯಮಗಳನ್ನು ಉಲ್ಲಂಘಿಸಿದ್ದು, ಅತ್ಯಂತ ದುಃಖಕರ ಸ್ಥಿತಿಯನ್ನು ತೋರ್ಪಡಿಸಲಿದೆ ಎಂದು ಅಭಿಪ್ರಾಯಪಟ್ಟಿದೆ.

ಅರ್ಜಿಯ ಸಂಬಂಧ ಸತತವಾಗಿ ಪಾಟಿಸವಾಲು ನಡೆಸುವಂತೆ ಹೈಕೋರ್ಟ್ ಸೂಚಿಸಿದ್ದರೂ, ಪತ್ನಿ ಅದಕ್ಕೆ ಸಹಕರಿಸಿಲ್ಲ. ಪ್ರಕರಣದಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ. ಪ್ರಕರಣವನ್ನು ಶೀಘ್ರ ವಿಲೇವಾರಿ ಮಾಡಲು ಯಾವುದೇ ಅವಕಾಶ ನೀಡಿಲ್ಲ. ಪತ್ನಿಯ ವರ್ತನೆಯಿಂದ ಬೇಸರಗೊಂಡಿರುವ ಕೌಟುಂಬಿಕ ನ್ಯಾಯಾಲಯ ಮಧ್ಯಂತರ ಅರ್ಜಿ ವಜಾಗೊಳಿಸಿ ಆದೇಶಿಸಿದೆ. ಕೌಟುಂಬಿಕ ನ್ಯಾಯಾಲಯ ನಡೆಸಿರುವ ವಿಚಾರಣೆ ಪ್ರಕ್ರಿಯೆ ಅತ್ಯಂತ ಶ್ಲಾಘನೀಯ ಎಂದು ತಿಳಿಸಿರುವ ಪೀಠ, ಕೌಟುಂಬಿಕ ನ್ಯಾಯಾಲಯದ ಆದೇಶದಲ್ಲಿ ಹಸ್ತಕ್ಷೇಪ ಮಾಡಲಾಗುವುದಿಲ್ಲ ಎಂದು ತಿಳಿಸಿ ಅರ್ಜಿಯನ್ನು ವಜಾಗೊಳಿಸಿ, ದಂಡ ವಿಧಿಸಿ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ

ಅರ್ಜಿದಾರ(ಪತ್ನಿ)ರ ಪತಿ ವಿಚ್ಚೇದನ ಕೋರಿ 2019ರ ಏಪ್ರಿಲ್ 4 ರಂದು ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ನೋಟಿಸ್ ಜಾರಿಯಾದ ಬಳಿಕ ವಕೀಲರ ಮೂಲಕ 2019ರ ಅಕ್ಟೋಬರ್ 19ರಂದು ನ್ಯಾಯಾಲಯಕ್ಕೆ ಹಾಜರಾಗಿದ್ದ ಅರ್ಜಿದಾರರು, ಸೂಕ್ತ ಸಮಯಕ್ಕೆ ಆಕ್ಷೇಪಣೆ ಸಲ್ಲಿಸಲು ವಿಫಲರಾಗಿದ್ದರು. ಇದೇ ಕಾರಣದಿಂದ ನ್ಯಾಯಾಧೀಶರು ಪಾಟಿಸವಾಲು ನಡೆಸಲಾಗಿಲ್ಲ ಎಂಬುದಾಗಿ ತಿಳಿಸಿ 2022ರ ಜೂನ್ 22ರಂದು ಆದೇಶಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಕೋರ್ಟ್ ಕಮಿಷನರ್​ನನ್ನು ನೇಮಕ ಮಾಡಿದ್ದ ಆದೇಶ ರದ್ದುಪಡಿಸಿ, ಪತ್ನಿಯ ಕಡೆಯಿಂದ ಯಾವುದೇ ವಿಳಂಬವಿಲ್ಲದೇ ಪ್ರಕರಣವನ್ನು ಮುಂದೂಡದೆ ವಿಚಾರಣೆ ನಡೆಸಲು ಆದೇಶಿಸಿತ್ತು. ಆ ಬಳಿಕ ಅರ್ಜಿದಾರರು ಮತ್ತೆ ಅರ್ಜಿಯನ್ನು ಪುನಃ ಪರಿಶೀಲನೆಗೊಳಪಡಿಸಬೇಕು ಮತ್ತು ಮರು ಪಾಟಿಸವಾಲು ನಡೆಸಬೇಕು. ಇದಕ್ಕಾಗಿ ವಿಚಾರಣೆ ಮುಂದೂಡಬೇಕು ಎಂದು ಕೋರಿದ್ದರು. ಈ ಮಧ್ಯಂತರ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ವೇಳೆ ಅರ್ಜಿದಾರರ(ಪತ್ನಿ) ಪರ ವಕೀಲರು, ವೈವಾಹಿಕ ಹಕ್ಕುಗಳ ಮರು ಸ್ಥಾಪನೆಗಾಗಿ ಕೋರಿ ಪತ್ನಿ ಸಲ್ಲಿಸಿರುವ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯ ಅನುಮೋದಿಸಿದೆ, ಆದ್ದರಿಂದ ಪತ್ನಿಯ ವೈವಾಹಿಕ ಹಕ್ಕುಗಳ ಮರು ಸ್ಥಾಪನೆಗಾಗಿ ಸಲ್ಲಿಸಿರುವ ಅರ್ಜಿಯ ಸಂಬಂಧ ಪಾಟಿಸವಾಲು ನಡೆಸುವುದಕ್ಕೆ ಅವಕಾಶ ನೀಡಬೇಕು. ಆದರೆ, ಈ ಸಂಬಂಧ ಕೋರಿದ್ದ ಮಧ್ಯಂತರ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯ ತಿರಸ್ಕರಿಸಿದೆ. ಆ ಅರ್ಜಿಯನ್ನು ಪರಿಗಣಿಸಲು ನಿರ್ದೇಶನ ನೀಡಬೇಕು ಎಂದು ಪೀಠಕ್ಕೆ ಕೋರಿದರು.

ಇದಕ್ಕೆ ಆಕ್ಷೇಪಿಸಿದ ಪತಿಯ ಪರ ವಕೀಲರು, ವಿವಾಹ ವಿಚ್ಛೇದನ ಕೋರಿ 2019ರಲ್ಲಿ ಅರ್ಜಿ ಸಲ್ಲಿಸಲಾಗಿದೆ. 2025ರವರೆಗೂ ಪತಿಯ ದಾಂಪತ್ಯ ಹಕ್ಕುಗಳು ಮರು ಸ್ಥಾಪನೆಗಾಗಿ ಯಾವುದೇ ಮನವಿ ಮಾಡಿಲ್ಲ. ಒಂದಲ್ಲ ಒಂದು ಕಾರಣ ನೀಡಿ ಕಾಲಾವಕಾಶ ತೆಗೆದುಕೊಳ್ಳುವುದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ.

ಮಧ್ಯಂತರ ಪರಿಹಾರವಾಗಿ ಪತಿ ಈಗಾಗಲೇ 27 ಲಕ್ಷ ರೂ. ಪಾವತಿಸಿದ್ದಾರೆ. ಇದಾದ ಬಳಿಕ ದಾಂಪತ್ಯ ಹಕ್ಕುಗಳ ಮರು ಸ್ಥಾಪನೆಗಾಗಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಇತ್ಯರ್ಥವಾಗದೇ ಸುದೀರ್ಘ ವಿಚಾರಣೆ ನಡೆಯಲಿ ಎಂಬ ಕಾರಣಕ್ಕಾಗಿ ಈ ಅರ್ಜಿನ್ನು ಸಲ್ಲಿಸಿದ್ದು, ಅರ್ಜಿಯನ್ನು ವಜಾಗೊಳಿಸಬೇಕು ಎಂದು ಪೀಠಕ್ಕೆ ಮನವಿ ಮಾಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments