ಬಾಂಗ್ಲಾದೇಶದಲ್ಲಿ ಮುಸ್ಲಿಮರು ಪ್ರಾಬಲ್ಯ ಹೊಂದಿರುವ ಪಿರೋಜ್ ಪುರ್ ಜಿಲ್ಲೆಯ ಡುಮ್ರಿಟಾಲಾ ಗ್ರಾಮದಲ್ಲಿ 5 ಹಿಂದೂ ಕುಟುಂಬಗಳ ಮನೆಗಳನ್ನು ದುಷ್ಕರ್ಮಿಗಳು ಬೆಂಕಿ ಹಚ್ಚಿ ಭಸ್ಮಗೊಳಿಸಿದ್ದಾರೆ.
29 ವರ್ಷದ ದೀಪು ಚಂದ್ರದಾಸ್ ಎಂಬ ಹಿಂದೂ ಯುವಕನನ್ನು ಗುಂಪು ಹಲ್ಲೆ ಮಾಡಿ ಕೊಲೆ ಮಾಡಿದ ಘಟನೆ ಬೆನ್ನಲ್ಲೇ ಹಿಂದೂ ಕುಟುಂಬಗಳ ಮೇಲೆ ದಾಳಿ ನಡೆದಿದ್ದು, ಬಾಂಗ್ಲಾದೇಶದಲ್ಲಿ ಅಲ್ಪ ಸಂಖ್ಯಾತ ಹಿಂದೂಗಳಿಗೆ ಆತಂಕ ಹೆಚ್ಚಾಗಿದೆ.
ಬೆಂಕಿ ಹಚ್ಚಿ ಹಿಂದೂ ಮನೆಗಳನ್ನು ನಾಶಪಡಿಸಲು ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಆದರೆ ದುಷ್ಕರ್ಮಿಗಳು ಬೆಂಕಿ ಹಾಕಿದ ಮನೆಯಲ್ಲಿ ಬಟ್ಟೆಗಳು ಹೆಚ್ಚಾಗಿ ಇದ್ದಿದ್ದರಿಂದ ಕೂಡಲೇ ಬೆಂಕಿ ಮನೆಗಳಿಗೆ ವ್ಯಾಪಿಸಿದೆ ಎಂದು ಹೇಳಲಾಗಿದೆ.
ಡಿಸೆಂಬರ್ 28ರಂದು ಮುಂಜಾನೆ ಮನೆಯಲ್ಲಿ ಎಲ್ಲರೂ ಮಲಗಿದ್ದಾಗ ಹೊರಗಿನಿಂದ ಚಿಲಕ ಹಾಕಿದ ನಂತರ ದುಷ್ಕರ್ಮಿಗಳು ಮನೆಗೆ ಬೆಂಕಿ ಹಚ್ಚಿದ್ದಾರೆ. ನೆರೆಹೊರೆಯವರು ದಟ್ಟ ಬೆಂಕಿಯ ನಡುವೆ ಮನೆಯೊಳಗೆ ಇದ್ದ 8 ಮಂದಿಯನ್ನು ರಕ್ಷಿಸಿದ್ದಾರೆ.
ಮನೆಯಲ್ಲಿ ಇದ್ದವರು ಪಾರಾಗಿದ್ದರೂ ಅವರ ಮನೆ ಹಾಗೂ ಎಲ್ಲಾ ವಸ್ತುಗಳು ಸಂಪೂರ್ಣ ನಾಶವಾಗಿದೆ. ಪ್ರಕರಣ ದಾಖಲಿಸಿಕೊಂಡ ಸ್ಥಳೀಯ ಪೊಲೀಸರು ಶಂಕಿತ 5 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಉಳಿದವರ ಪತ್ತೆಗೆ ಶೋಧ ಕಾರ್ಯ ನಡೆದಿದೆ.



