ವೆನಿಜುವೆಲಾದಲ್ಲಿ 39 ಸೆಕೆಂಡ್ ಗಳ ಅಂತರದಲ್ಲಿ ಸಂಭವಿಸಿದ ಎರಡು ಪ್ರಬಲ ಭೂಕಂಪನದಿಂದ ಇಡೀ ದೇಶ ತತ್ತರಿಸಿದ್ದು, ಪ್ರಾಥಮಿಕ ಮಾಹಿತಿ ಪ್ರಕಾರ 32 ಮಂದಿ ಮೃತಪಟ್ಟಿದ್ದು, 700ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಕಾರಕಾಸ್ ನಲ್ಲಿ ಗುರುವಾರ ಬೆಳಿಗ್ಗೆ ಮೊದಲ ಬಾರಿ ಸಂಭವಿಸಿದ ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 7.9ರಷ್ಟು ತೀವ್ರತೆ ದಾಖಲಿಸಿದರೆ ಎರಡನೇ ಬಾರಿ 7.5ರಷ್ಟು ತೀವ್ರತೆ ದಾಖಲಿಸಿದೆ. 39 ಸೆಕೆಂಡ್ ಗಳಲ್ಲಿ 2 ಪ್ರಬಲ ಭೂಕಂಪನ ಸಂಭವಿಸಿದ ನಂತರ ಸುಮಾರು 20 ಬಾರಿ ಭೂಮಿ ಕಂಪಿಸಿದೆ ಎಂದು ಭೂವಿಜ್ಞಾನಿಗಳು ತಿಳಿಸಿದ್ದಾರೆ.
ಸುಮಾರು 1 ಲಕ್ಷ ಜನರು ನೆಲೆಸಿರುವ ಕಾರಕಾಸ್ ಮತ್ತು ಮೂರನ್ ನಗರಗಳಲ್ಲಿ ಪ್ರಬಲವಾದ ಭೂಕಂಪನ ಸಂಭವಿಸಿದ್ದು, ನಗರದ ಬೃಹತ್ ಕಟ್ಟಡಗಳು ಧರೆಗುರುಳಿವೆ. ನಗರದ ತುಂಬಾ ಧೂಳು ಆವರಿಸಿದ್ದು, ರಕ್ಷಣಾ ಕಾರ್ಯಕ್ಕೆ ಅಡ್ಡಿಯುಂಟಾಗಿದೆ.
ಭೂಕಂಪನ ಸಂಭವಿಸಿದ ನಾಲ್ಕು ಗಂಟೆಗಳ ನಂತರ 32 ಮಂದಿ ಮೃತಪಟ್ಟಿರುವುದು ದೃಢಪಟ್ಟಿದ್ದು, 15 ಮಂದಿ ಆವಶೇಷಗಳಡಿ ಸಿಲುಕಿದ್ದು, ಅವರನ್ನು ರಕ್ಷಿಸುವ ಕೆಲಸ ನಡೆಯುತ್ತಿದೆ. 700 ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.



