ಸೋಲ್: ವಾಗ್ದಂಡನೆ ನಿರ್ಣಯ ಅಂಗೀಕರಿಸುವ ಮೂಲಕ ದಕ್ಷಿಣ ಕೊರಿಯಾ ಸಂಸತ್ತು ಅಧ್ಯಕ್ಷ ಯೂನ್ ಸುಕ್ ಯೆಯೋಲ್ ಅವರನ್ನು ಪದಚ್ಯುತಗೊಳಿಸಿದೆ.
ದೇಶದಲ್ಲಿ ಮಿಲಿಟರಿ ಕಾನೂನನ್ನು ಹೇರುವ ವಿವಾದಾತ್ಮಕ ಪ್ರಯತ್ನದ ಕುರಿತಾದ ರಾಜಕೀಯ ಬಿಕ್ಕಟ್ಟಿನ ಮಧ್ಯೆ ಅವರನ್ನು ಅಧಿಕಾರದಿಂದ ಕೆಳಗಿಳಿಸಲಾಗಿದೆ.
“ಇಂದಿನ (ಶನಿವಾರ) ವಾಗ್ದಂಡನೆ ಜನರ ದೊಡ್ಡ ಗೆಲುವು” ಎಂದು ಪ್ರತಿಪಕ್ಷ ಡೆಮಾಕ್ರಟಿಕ್ ಪಕ್ಷದ ನಾಯಕ ಪಾರ್ಕ್ ಚಾನ್-ಡೇ ಮತದಾನದ ನಂತರ ಹೇಳಿದರು. 204 ಸಂಸದರ ಬೆಂಬಲದೊಂದಿಗೆ ವಾಗ್ದಂಡನೆ ನಿರ್ಣಯವನ್ನು ಅಂಗೀಕರಿಸಲಾಯಿತು.
ಇದೇ ವೇಳೆ ಸಂಸತ್ತಿನ ಕಟ್ಟಡದ ಹೊರಗೆ ಸಾವಿರಾರು ಪ್ರತಿಭಟನಾಕಾರರು ಜಮಾಯಿಸಿ, ಬ್ಯಾನರ್ಗಳನ್ನು ಬೀಸುತ್ತಾ ಮತ್ತು ಯೂನ್ ಅವರನ್ನು ತೆಗೆದುಹಾಕುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.
ಯೂನ್ (63) ಅವರನ್ನು ಅಧಿಕಾರದಿಂದ ಅಮಾನತುಗೊಳಿಸಲಾಗಿದ್ದು, ಪ್ರಧಾನಿ ಹಾನ್ ಡಕ್-ಸೂ ಹಂಗಾಮಿ ಅಧ್ಯಕ್ಷರ ಪಾತ್ರವನ್ನು ವಹಿಸಿಕೊಳ್ಳಲಿದ್ದಾರೆ. ದಕ್ಷಿಣ ಕೊರಿಯಾದ ಸಾಂವಿಧಾನಿಕ ನ್ಯಾಯಾಲಯವು ಯೂನ್ ಅವರ ಭವಿಷ್ಯದ ಬಗ್ಗೆ ಚರ್ಚಿಸುತ್ತದೆ ಮತ್ತು 180 ದಿನಗಳಲ್ಲಿ ತೀರ್ಪು ನೀಡುತ್ತದೆ.
ನ್ಯಾಯಾಲಯವು ನಿರ್ಣಯವನ್ನು ಎತ್ತಿಹಿಡಿದರೇ, ಯೂನ್ ಅವರು ದಕ್ಷಿಣ ಕೊರಿಯಾದ ಇತಿಹಾಸದಲ್ಲಿ ಯಶಸ್ವಿಯಾಗಿ ವಾಗ್ದಂಡನೆಗೊಳಗಾದ ಎರಡನೇ ಅಧ್ಯಕ್ಷರಾಗಲಿದ್ದಾರೆ. ಈ ಬೆಳವಣಿಗೆಯ ನಂತರ 60 ದಿನಗಳ ಒಳಗೆ ಅಧ್ಯಕ್ಷೀಯ ಚುನಾವಣೆ ನಡೆಯಬೇಕಿದೆ.
ಕಳೆದ ವಾರ, ಯೂನ್ ಅವರ ಕನ್ಸರ್ವೇಟಿವ್ ಪೀಪಲ್ಸ್ ಪವರ್ ಪಾರ್ಟಿಯ ಹೆಚ್ಚಿನ ಶಾಸಕರು ಕಲಾಪಗಳನ್ನು ಬಹಿಷ್ಕರಿಸಿದ ಕಾರಣ ಯೂನ್ ವಾಗ್ದಂಡನೆಯಿಂದ ತಪ್ಪಿಸಿಕೊಂಡಿದ್ದರು. ಮಿಲಿಟರಿ ಕಾನೂನು ಪ್ರಯತ್ನ ವಿಫಲವಾದ ನಂತರ ಅವರು ಅಧಿಕಾರದಿಂದ ಕೆಳಗಿಳಿಯಬೇಕೆಂದು ಹೆಚ್ಚುತ್ತಿರುವ ಕರೆಗಳ ಹೊರತಾಗಿಯೂ ಅವರು ಅಧಿಕಾರಕ್ಕೆ ಅಂಟಿಕೊಂಡಿದ್ದರು.
ಹಿನ್ನೆಲೆ ಏನು?
ಅಧ್ಯಕ್ಷ ಯೂನ್ ಅವರು ಏಕಾಏಕಿ ಡಿಸೆಂಬರ್ 3ರ ರಾತ್ರಿ ದಕ್ಷಿಣ ಕೊರಿಯಾದಲ್ಲಿ ಮಿಲಿಟರಿ ಕಾನೂನು ಘೋಷಿಸಿದರು. ಪ್ರತಿಪಕ್ಷಗಳ ನಿಯಂತ್ರಿತ ಸಂಸತ್ತು ಸರ್ಕಾರದ ವ್ಯವಹಾರಗಳನ್ನು ನಿಷ್ಕ್ರಿಯಗೊಳಿಸುವ ಅಪರಾಧಿಗಳ ಗುಹೆ ಆಗಿ ಮಾರ್ಪಟ್ಟಿದೆ ಎಂದು ಅವರು ಈ ಕ್ರಮದಕ್ಕೆ ಕಾರಣ ನೀಡಿದ್ದರು.
ಅವರ ಪ್ರಕಾರ, ಕಮ್ಯುನಿಸ್ಟ್ ಪರ ಶಕ್ತಿಗಳನ್ನು ತೆಗೆದುಹಾಕಲು ಮತ್ತು ಸಾಂವಿಧಾನಿಕ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಮಿಲಿಟರಿ ಕಾನೂನು ಘೋಷಿಸುವುದು ಅಗತ್ಯವಾಗಿತ್ತು.
ಯೂನ್ ರಾಷ್ಟ್ರೀಯ ಅಸೆಂಬ್ಲಿ ಕಟ್ಟಡವನ್ನು ಭದ್ರಪಡಿಸಲು ಸೈನ್ಯವನ್ನು ಕರೆದರು, ಸಾವಿರಾರು ದಕ್ಷಿಣ ಕೊರಿಯನ್ನರು ಬೀದಿಗಿಳಿದು ಅವರು ರಾಜೀನಾಮೆ ನೀಡುವಂತೆ ಮತ್ತು ಮಿಲಿಟರಿ ಕಾನೂನನ್ನು ತೆಗೆದುಹಾಕುವಂತೆ ಕರೆ ನೀಡಿದರು.
ದಕ್ಷಿಣ ಕೊರಿಯಾದಲ್ಲಿ ನಾಲ್ಕು ದಶಕಗಳಲ್ಲಿ ಮೊದಲ ಬಾರಿಗೆ ಹೇರಲಾದ ಮಿಲಿಟರಿ ಕಾನೂನು ಕೇವಲ ಆರು ಗಂಟೆಗಳಲ್ಲಿ ಕರಗಿತು. ಸಂಸತ್ತು ಅದನ್ನು ರದ್ದುಗೊಳಿಸಲು ಸರ್ವಾನುಮತದಿಂದ ಮತ ಚಲಾಯಿಸಿದ ನಂತರ ಯೂನ್ ತನ್ನ ಆದೇಶವನ್ನು ಹಿಂತೆಗೆದುಕೊಳ್ಳಬೇಕಾಯಿತು.