ಸ್ಪಿನ್ನರ್ ಹಸರಂಗ ಮಾರಕ ದಾಳಿ ಹಾಗೂ ನಿತೀಶ್ ರಾಣಾ ಅವರ ಸಿಡಿಲಬ್ಬರದ ಆಟದಿಂದ ರಾಜಸ್ಥಾನ್ ರಾಯಲ್ಸ್ ತಂಡ 6 ರನ್ ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿ ಐಪಿಎಲ್ ಟಿ-20 ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿದೆ.
ಗುವಾಹತಿಯಲ್ಲಿ ಭಾನುವಾರ ನಡೆದ ಎರಡನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 182 ರನ್ ಪೇರಿಸಿತು. ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 176 ರನ್ ಗಳಿಸಲಷ್ಟೇ ಶಕ್ತವಾಯಿತು.
ಚೆನ್ನೈ ತಂಡ ಖಾತೆ ತೆರೆಯುವ ಮುನ್ನವೇ ರಚಿನ್ ರವೀಂದ್ರ ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಯಿತು. ನಾಯಕ ಋತುರಾಜ್ ಗಾಯಕ್ವಾಡ್ 44 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಸೇರಿದ 63 ರನ್ ಬಾರಿಸಿ ತಂಡವನ್ನು ಆಧರಿಸಿದರು.
ಆದರೆ ಮತ್ತೊಂದೆಡೆ ಹಸರಂಗ ದಾಳಿಗೆ ತತ್ತರಿಸಿ ತಂಡ ನಿಯಮಿತವಾಗಿ ವಿಕೆಟ್ ಕಳೆದುಕೊಂಡಿತು. ಅಲ್ಲದೇ ರನ್ ಸರಾಸರಿ ಕಾಯ್ದುಕೊಳ್ಳುವಲ್ಲಿಯೂ ವಿಫಲವಾಯಿತು.
ತ್ರಿಪಾಠಿ (23), ಜಡೇಜಾ (32) ಮತ್ತು ಧೋನಿ (16) ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾದರು. ಹಸರಂಗ 4 ವಿಕೆಟ್ ಪಡೆದು ಮಿಂಚಿದರೆ, ಜೋಫ್ರಾ ಆರ್ಚರ್ 3 ಓವರ್ ನಲ್ಲಿ 13 ರನ್ ನೀಡಿ 1 ವಿಕೆಟ್ ಪಡೆದರೆ, ಸಂದೀಪ್ ಶರ್ಮ ಕೊನೆಯ ಓವರ್ ನಲ್ಲಿ 20 ರನ್ ಬೇಕಿದ್ದಾಗ ಧೋನಿ ವಿಕೆಟ್ ಪಡೆದಿದ್ದೂ ಅಲ್ಲದೇ 14 ರನ್ ನೀಡಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ರಾಜಸ್ಥಾನ್ ತಂಡ ಕೂಡ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿತು. ಆದರೆ ನಿತೀಶ್ ರಾಣಾ 36 ಎಸೆತಗಳಲ್ಲಿ 10 ಬೌಂಡರಿ ಮತ್ತು 5 ಸಿಕ್ಸರ್ ಒಳಗೊಂಡ 81 ರನ್ ಸಿಡಿಸಿ ತಂಡ ಉತ್ತಮ ಮೊತ್ತ ದಾಖಲಿಸಲು ನೆರವಾದರು. ಇವರಿಗೆ ಸಂಜು ಸ್ಯಾಮ್ಸನ್ (20), ನಾಯಕ ರಿಯಾನ್ ಪರಾಗ್ (37) ತಕ್ಕಮಟ್ಟಿಗೆ ಸಹಾಯಕ ಮಾಡಿದರು. ಆದರೆ ನಂತರ ನಾಟಕೀಯ ಕುಸಿತ ಕಂಡಿದ್ದರಿಂದ 200ರ ಗಡಿ ತಲುಪಲು ವಿಫಲವಾಯಿತು.



