Friday, May 15, 2026
Google search engine
Homeರಾಜ್ಯಸೆ.22ರಿಂದ ವೈಜ್ಞಾನಿಕ, ನಿಖರ ಜಾತಿ ಗಣತಿಗೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ

ಸೆ.22ರಿಂದ ವೈಜ್ಞಾನಿಕ, ನಿಖರ ಜಾತಿ ಗಣತಿಗೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ

ಬೆಂಗಳೂರು: ಸೆಪ್ಟಂಬರ್ 22ರಿಂದ ಅಕ್ಟೋಬರ್ 7ರವರೆಗೆ 15 ದಿನಗಳ ಕಾಲ ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕುರಿತಾದ ಪೂರ್ವಭಾವಿ ಸಭೆಯಲ್ಲಿ ಸೆಪ್ಟೆಂಬರ್ 22ರಿಂದ 15 ದಿನಗಳ ವೈಜ್ಞಾನಿಕ ಹಾಗೂ ನಿಖರ ಸಮೀಕ್ಷೆ ನಡೆಸಿ ಅಕ್ಟೋಬರ್ ಕೊನೆಯಲ್ಲಿ ಸಮೀಕ್ಷೆ ವರದಿ ಸಲ್ಲಿಕೆಗೆ ತೀರ್ಮಾನಿಸಲಾಯಿತು.

ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಹಿಂದುಳಿದ ವರ್ಗಗಳ ಆಯೋಗ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುವ ಕುರಿತಾಗಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದೆ. ಇದರಂತೆ ರಾಜ್ಯದ ಎಲ್ಲಾ 7ಕೋಟಿ ಜನರ ಸಮೀಕ್ಷೆ ನಡೆಸಲಾಗುವುದು. ಜಾತಿ ತಾರತಮ್ಯ ನಿವಾರಣೆ ಮಾಡುವುದು ಗಣತಿಯ ಮುಖ್ಯ ಉದ್ದೇಶ ಎಂದು ತಿಳಿಸಿದರು.

ರಾಜ್ಯದ ಪ್ರತಿಯೊಬ್ಬರ ಆರ್ಥಿಕ ಪರಿಸ್ಥಿತಿ, ಜಮೀನು ಇದೆಯೇ ಇಲ್ಲವೇ ಸೇರಿದಂತೆ ಸಮಗ್ರ ಸಮೀಕ್ಷೆ ನಡೆಯಬೇಕು. ಈ ಸಮೀಕ್ಷೆ ವರದಿ ಮುಂದಿನ ಬಜೆಟ್ ಸಿದ್ಧಪಡಿಸುವ ಸಂದರ್ಭದಲ್ಲಿ ಆಧಾರವಾಗಲಿದೆ. ಈ ಬಾರಿಯ ಸಮೀಕ್ಷೆ ದೇಶದಲ್ಲೇ ಮಾದರಿ ಸಮೀಕ್ಷೆಯಾಗಬೇಕು ಎಂದು ಅವರು ಹೇಳಿದರು.

ತರಬೇತಿ ಸೇರಿದಂತೆ ಸಮೀಕ್ಷೆಗೆ ಪೂರ್ವಭಾವಿ ಸಿದ್ಧತೆಗಳನ್ನು ಈಗಲೇ ಆರಂಭಿಸಬೇಕು. ಸಮೀಕ್ಷೆ ಅತ್ಯಂತ ಸಮರ್ಪಕವಾಗಿ ನಡೆಯಬೇಕು. ಸಮೀಕ್ಷೆ ಕುರಿತು ಯಾವುದೇ ದೂರುಗಳಿಗೆ ಅಸ್ಪದವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಸಮೀಕ್ಷೆಯಿಂದ ಯಾರೂ ಹೊರಗುಳಿಯದಂತೆ ಖಾತ್ರಿಪಡಿಸಬೇಕು ಎಂದು ಅವರು ಸಲಹೆ ನೀಡಿದರು.

ಕಾಂತರಾಜು ಆಯೋಗ 54 ಪ್ರಶ್ನೆಗಳನ್ನು ಸಿದ್ದಪಡಿಸಿ manual ಆಗಿ ಈ ಹಿಂದೆ ಸಮೀಕ್ಷೆ ನಡೆಸಿತ್ತು. ಈ ಬಾರಿಯ ಸಮೀಕ್ಷೆಯಲ್ಲಿ ಇನ್ನಷ್ಟು ಅಂಶಗಳನ್ನು ಸೇರಿಸುವ ಕುರಿತು ಪರಿಶೀಲನೆ. ಈ ಬಾರಿ ಮೊಬೈಲ್ ಆಪ್ ಬಳಸಿಕೊಂಡು ಸಮೀಕ್ಷೆ ನಡೆಸಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ವಿವರಿಸಿದರು.

ತೆಲಂಗಾಣದಲ್ಲಿ ಕೈಗೊಳ್ಳಲಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ ಕುರಿತು ಅಧ್ಯಯನ ನಡೆಸಲು ಸೂಚನೆ. ಸಮೀಕ್ಷೆ ಕಾರ್ಯದ ಮೇಲುಸ್ತುವಾರಿಗೆ ಉನ್ನತಮಟ್ಟದ ಸಮಿತಿ ರಚಿಸಲು ತಿರ್ಮಾನಿಸಲಾಗಿದೆ. ಸಮೀಕ್ಷೆ ವೈಜ್ಞಾನಿಕವಾಗಿ ಮತ್ತು ಪಾರದರ್ಶಕವಾಗಿ ನಡೆಯಬೇಕು. ಸಮೀಕ್ಷೆಯಲ್ಲಿ ಕೇಳಬೇಕಾದ ಪ್ರಶ್ನೆಗಳನ್ನು ಅಂತಿಮಗೊಳಿಸಲು ತಜ್ಞರ ಸಮಿತಿಯ ನೆರವು ಪಡೆಯಬೇಕು ಎಂದು ಅವರು ಹೇಳಿದರು.

ಈ ಬಾರಿ ಸಮೀಕ್ಷೆ ಕಾರ್ಯಕ್ಕೆ 1.65ಲಕ್ಷ ಗಣತಿದಾರರು ಸೇರಿದಂತೆ ಮಾನವ ಸಂಪನ್ಮೂಲ ಅವಶ್ಯಕತೆಯಿದೆ. ಸಮೀಕ್ಷೆ ಕಾರ್ಯಕ್ಕೆ ಶಿಕ್ಷಕರ ಸೇವೆಯೊಂದಿಗೆ ಇತರ ಇಲಾಖೆಗಳ ಸಿಬ್ಬಂದಿಗಳನ್ನು ಸಹ ಬಳಸಿಕೊಳ್ಳಲಾಗುವುದು. ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಸಮೀಕ್ಷೆ ಕಾರ್ಯವನ್ನು ಯಶಸ್ವಿಗೊಳಿಸಬೇಕು ಎಂದು ಮುಖ್ಯಮಂತ್ರಿ ಅವರು ತಿಳಿಸಿದರು.

ಸಚಿವರಾದ ಶಿವರಾಜ ತಂಗಡಗಿ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂಧನ ಆರ್ ನಾಯ್ಕ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರ ಪೊನ್ನಣ್ಣ, ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments