Sunday, June 14, 2026
Google search engine
Homeರಾಜ್ಯಕೃಷ್ಣ ಮೇಲ್ದಂಡೆ ಭೂಸ್ವಾಧೀನ ಪರಿಹಾರಕ್ಕಾಗಿ ಗ್ಯಾರಂಟಿ, 3 ಇಲಾಖೆಗಳ ಅನುದಾನ ಕಡಿತ?

ಕೃಷ್ಣ ಮೇಲ್ದಂಡೆ ಭೂಸ್ವಾಧೀನ ಪರಿಹಾರಕ್ಕಾಗಿ ಗ್ಯಾರಂಟಿ, 3 ಇಲಾಖೆಗಳ ಅನುದಾನ ಕಡಿತ?

ಕೃಷ್ಣ ಮೇಲ್ದಂಡೆ ನೀರಾವರಿ ಯೋಜನೆಯ ಭೂಸ್ವಾಧೀನ ಪರಿಹಾರ ಮೊತ್ತವಾದ 75,000 ಕೋಟಿ ರೂ.ಗಾಗಿ ರಾಜ್ಯ ಸರ್ಕಾರ ಮೂರು ಇಲಾಖೆಗಳ ಬಜೆಟ್ ಕಡಿತ ಮಾಡಲು ಮುಂದಾಗಿದೆ.

ಆಲಮಟ್ಟಿ ಆಣೆಕಟ್ಟು ಎತ್ತರವನ್ನು ಹೆಚ್ಚಿಸುವುದರಿಂದ ಮುಳುಗಡೆ ಆಗುವ ಪ್ರದೇಶಗಳಿಗೆ ರಾಜ್ಯ ಸರಕಾರ ಪರಿಹಾರ ಮೊತ್ತ ನಿಗದಿಪಡಿಸಿದೆ. ನೀರಾವರಿ ಪ್ರದೇಶದ 1 ಎಕರೆಗೆ 40 ಲಕ್ಷ ರೂ. ಹಾಗೂ ಒಣಭೂಮಿಗೆ 30 ಲಕ್ಷ ರೂ. ನಿಗದಿಪಡಿಸಿದೆ.

ಭೂಸ್ವಾಧೀನ ಪರಿಹಾರ ಮೊತ್ತಕ್ಕಾಗಿ ರಾಜ್ಯ ಸರ್ಕಾರದ ಮೇಲೆ 75 ಸಾವಿರ ಕೋಟಿ ರೂ. ಹೊರೆಯಾಗಲಿದೆ. ಈ ಹಣವನ್ನು ಹೊಂದಿಸಲು ಶಿಕ್ಷಣ, ಆರೋಗ್ಯ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ ಅನುದಾನದಲ್ಲಿ ಶೇ.10ರಂತೆ ನಾಲ್ಕು ವರ್ಷಗಳ ಕಾಲ ಕಡಿತ ಮಾಡಲು ನಿರ್ಧರಿಸಲಾಗಿದೆ.

ಮತ್ತೊಂದು ಮೂಲಗಳ ಪ್ರಕಾರ ರಾಜ್ಯ ಸರ್ಕಾರ ಈ ದೊಡ್ಡ ಮೊತ್ತವನ್ನು ಹೊಂದಿಸಿಕೊಳ್ಳಲು ಗ್ಯಾರಂಟಿ ಯೋಜನೆಗಳ ಮೊತ್ತದಲ್ಲಿ ಕಡಿತ ಮಾಡುವ ಬಗ್ಗೆ ಚಿಂತನೆ ನಡೆಸಿದೆ. ಗ್ಯಾರಂಟಿ ಯೋಜನೆಗಳಿಗೆ ರಾಜ್ಯ ಸರ್ಕಾರ 51ರಿಂದ 60 ಸಾವಿರ ಕೋಟಿ ರೂ. ವಿನಿಯೋಗಿಸುತ್ತಿದೆ.

ಅಲಮಟ್ಟಿ ಆಣೆಕಟ್ಟೆಯನ್ನು 520ರಿಂದ 524 ಮೀಟರ್ ಗೆ ಎತ್ತರಿಸಲಾಗುತ್ತಿದೆ. ಇದರಿಂದ 76 ಸಾವಿರ ಎಕರೆ ಪ್ರದೇಶ ಮುಳುಗಡೆ ಆಗಲಿದೆ. ಇದರಿಂದ 58 ಸಾವಿರ ಎಕರೆ ಚಾನೆಲ್ ನಿರ್ಮಾಣ ಹಾಗೂ ನಿರಾಶ್ರಿತರಿಗೆ ಪುನರ್ ವಸತಿ ಸೌಕರ್ಯ ಕಲ್ಪಿಸಲು ಬಳಕೆಯಾಗಲಿದೆ. ಇದರಿಂದ ಸುಮಾರು 1.33 ಲಕ್ಷ ಹೆಕ್ಟೇರ್ ಪ್ರದೇಶ ಸರ್ಕಾರಕ್ಕೆ ಬೇಕಾಗಿದೆ.

ಈ ಹಿಂದೆ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಆಡಳಿತದಲ್ಲಿ ಇದ್ದಾಗ ಭೂಸ್ವಾಧೀನ ಪರಿಹಾರಕ್ಕೆ ನೀರಾವರಿ ಭೂಮಿ ಎಕರೆಗೆ 24 ಲಕ್ಷ ರೂ. ಹಾಗೂ ಒಣಭೂಮಿಗೆ 30 ಲಕ್ಷ ರೂ. ನಿಗದಿಪಡಿಸಲಾಗಿತ್ತು. ಪರಿಹಾರ ಮೊತ್ತ ಕಡಿಮೆ ಆಗಿದೆ ಎಂದು ರೈತರು ಕೋರ್ಟ್ ಮೆಟ್ಟಿಲೇರಿದ್ದರು.

ನೀರಾವರಿ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ವಿಶೇಷ ಸಚಿವ ಸಂಪುಟ ಸಭೆಯ ನಂತರ ಮಾತನಾಡಿ, ಇದೊಂದು ಐತಿಹಾಸಿಕ ತೀರ್ಮಾನವಾಗಿದೆ. ರೈತರು ನಮ್ಮ ನಿರ್ಧಾರವನ್ನು ಒಪ್ಪುವ ವಿಶ್ವಾಸವಿದೆ. ರೈತರಿಗೆ ಪರಿಹಾರ ಮೊತ್ತವನ್ನು 3 ವರ್ಷಗಳ ಅವಧಿಯಲ್ಲಿ ಹಂಚಿಕೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಇದೇ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರೈತರ ಬೇಡಿಕೆ ಗಮನಿಸಿ ಪರಿಹಾರ ಮೊತ್ತ ಹೆಚ್ಚಿಸಲಾಗಿದೆ. ಸರ್ಕಾರ ನೀರಾವರಿ ಯೋಜನೆಗೆ ರೈತರಿಗೆ ಅನುಕೂಲ ಮಾಡಿಕೊಡುತ್ತಿದೆ. ಇದರಿಂದ 5 ಲಕ್ಷ ಹೆಕ್ಟೇರ್ ಗೂ ಅಧಿಕ ಕೃಷಿ ಭೂಮಿಗೆ ನೀರು ಸಿಗಲಿದೆ. ರೈತರು ಕಾನೂನು ಹೋರಾಟ ಮಾಡದೇ ಸಹಕರಿಸುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments