ಮೈಸೂರು: ಕೇರಳ ಹಾಗೂ ಕರ್ನಾಟಕದ ಗಡಿ ಭಾಗದಲ್ಲಿ ಮುಂಗಾರು ಮಳೆ ಚುರುಕಾಗಿದ್ದು, ಭಾರೀ ಮಳೆ ಹಿನ್ನೆಲೆಯಲ್ಲಿ ಕಪಿಲಾ ಮತ್ತು ಕಾವೇರಿ ನದಿಗಳು ತುಂಬಿ ಹರಿಯುತ್ತಿವೆ. 45 ವರ್ಷಗಳ ನಂತರ ಇದೇ ಮೊದಲ ಬಾರಿ ಕೆಆರ್ ಎಸ್ ಜಲಾಶಯ ಜೂನ್ ತಿಂಗಳಲ್ಲೇ ಭರ್ತಿಯಾಗುವ ಸಾಧ್ಯತೆ ಇದೆ.
ಕೇರಳದ ವಯನಾಡಿನಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಮೈಸೂರಿನ ಕಪಿಲಾ ನದಿ ಮೈದುಂಬಿ ಹರಿಯುತ್ತಿದ್ದು, ನಂಜನಗೂಡಿನ ಶ್ರೀನಂಜುಂಡೇಶ್ವರಸ್ವಾಮಿಯ ಸ್ನಾನ ಘಟ್ಟದಲ್ಲಿನ 16 ಕಾಲು ಮಂಟಪಗಳು ಮುಳುಗಡೆಯ ಹಂತಕ್ಕೆ ಬಂದಿವೆ.
ಸ್ನಾನಘಟ್ಟದ ಮೆಟ್ಟಿಲುಗಳು ಬಹುತೇಕ ಮುಳುಗಡೆಯಾಗಿವೆ. ಹೀಗಾಗಿ ಧ್ವನಿವರ್ಧಕದ ಮೂಲಕ ನದಿ ಹತ್ತಿರ ಹೋಗದಂತೆ ಜನರಿಗೆ ಎಚ್ಚರಿಕೆ ಸಂದೇಶ ನೀಡಲಾಗುತ್ತಿದೆ.
ಕಪಿಲಾ ನದಿ ನೋಡಲು ಭಕ್ತಾದಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ನದಿ ಹತ್ತಿರ ಸುಳಿಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ಮಳೆಯ ಪರಿಣಾಮ ಹೆಚ್.ಡಿ ಕೋಟೆಯ ಕಬಿನಿ ಜಲಾಶಯ ಬಹುಬೇಗ ಭರ್ತಿಯಾಗಿದೆ. ಜಲಾಶಯದ ಭದ್ರತಾ ದೃಷ್ಟಿಯಿಂದ ಹೊರಹರಿವು ಹೆಚ್ಚಿಸಲಾಗುತ್ತಿದ್ದು, ಪರಿಣಾಮ ಕಪಿಲಾ ನದಿ ಮೈದುಂಬಿ ಹರಿಯುತ್ತಿದೆ.
ಮತ್ತೊಂದೆಡೆ ಕಾವೇರಿ ನದಿ ಕೂಡು ತುಂಬಿ ಹರಿಯುತ್ತಿದ್ದ ಕೆಆರ್ ಎಸ್ ಜಲಾಶಯ ಭರ್ತಿಗೆ ಕ್ಷಣಗಣನೆ ಆರಂಭವಾಗಿದೆ. ಗರಿಷ್ಠ 124 ಅಡಿ ಎತ್ತರದ ಕೆಆರ್ ಎಸ್ ಜಲಾಶಯದಲ್ಲಿ 120 ಅಡಿ ನೀರು ತುಂಬಿದ್ದು, ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಲು ಕೇವಲ 4 ಅಡಿ ಮಾತ್ರ ಬಾಕಿ ಇದೆ.
ಜೂನ್ ತಿಂಗಳಲ್ಲೇ ಡ್ಯಾಂ ಭರ್ತಿಯಾಗುವಂತೆ ಕಾಣಿಸುತ್ತಿದೆ. 45 ವರ್ಷಗಳ ಬಳಿಕ ಜೂನ್‌ನಲ್ಲಿ ಕೆಆರ್‌ಎಸ್ ಡ್ಯಾಂ ಭರ್ತಿಯಾಗುತ್ತಿರುವುದಕ್ಕೆ ರೈತರು ಸಂತಸಗೊಂಡಿದ್ದಾರೆ.
ಇಂದಿನ ಗರಿಷ್ಟ ನೀರಿನ ಮಟ್ಟ:124.80 ಅಡಿ, ಇಂದಿನ ನೀರಿನ ಮಟ್ಟ: 120.20 ಅಡಿ, ಡ್ಯಾಂನ ಒಳಹರಿವು: 13856 ಕ್ಯೂಸೆಕ್, ಡ್ಯಾಂನ ಹೊರ ಹರಿವು: 1965 ಕ್ಯೂಸೆಕ್, ಪ್ರಸ್ತುತ ನೀರಿನ ಸಂಗ್ರಹ 43.298 ಟಿಎಂಸಿ ದಾಖಲಾಗಿದೆ.



