ತಿರುವನಂತಪುರ: ಮಲಯಾಳಂ ಸಿನಿಮಾ ಜಗತ್ತಿನ ದಿಗ್ಗಜ ನಟ ಮೋಹನ್ ಲಾಲ್ ನಟಿಸಿರುವ “ಎಲ್-೨: ಎಂಪುರಾನ್” ಬಿಡುಗಡೆ ಆದ ಎರಡೇ ದಿನದಲ್ಲಿ ವಿವಾದಗಳ ನಡುವೆಯೂ 50 ಕೋಟಿ ರೂ. ಬಾಚಿ ಹೊಸ ದಾಖಲೆ ಬರೆದಿದೆ.
ಲೂಸಿಫರ್ ಚಿತ್ರದ ಎರಡನೇ ಭಾಗವಾಗಿರುವ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮೊದಲ ದಿನ 22 ಕೋಟಿ ರೂ. ಗಳಿಸಿದ್ದ ಚಿತ್ರ ಎರಡನೇ ದಿನ ಬಂಪರ್ ಹೊಡೆದಿದ್ದು, 50 ಕೋಟಿ ರೂ. ಬಾಚಿ ಮಲಯಾಳಂ ಚಿತ್ರರಂಗದಲ್ಲೇ ಅತ್ಯಂತ ವೇಗವಾಗಿ 50 ಕೋಟಿ ಬಾಚಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
“ಎಂಪುರಾನ್” ಚಿತ್ರವು 2002ರ ಗುಜರಾತ್ ಗಲಭೆ ವಿಷಯಗಳನ್ನು ಪ್ರಸ್ತಾಪಿಸಿದ್ದು, ಸಂಘ ಪರಿವಾರದ ಬಣ್ಣ ಬಯಲಿಗಿಳಿದಿದೆ ಎಂದು ಕಾಂಗ್ರೆಸ್ ಮತ್ತು ಎಡಪಕ್ಷಗಳು ಹೇಳಿಕೆ ನೀಡಿದರೆ, ಬಲಪಂಥೀಯ ಸಂಘಟನೆಗಳು ಇದನ್ನು “ಹಿಂದು ವಿರೋಧಿ ಪ್ರಚಾರ” ಎಂದು ಟೀಕಿಸಿವೆ. ಇದರಿಂದ ಸಿನಿಮಾಗೆ ರಾಜಕೀಯ ಚರ್ಚೆಗೆ ಕಾರಣವಾಗಿದೆ.
ಚಿತ್ರದಲ್ಲಿ ಭಜರಂಗಿ ಎಂಬ ಪಾತ್ರವು 2002ರ ಗಲಭೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಾಬು ಬಜರಂಗಿಯನ್ನು ಪ್ರತಿಬಿಂಬಿಸುತ್ತದೆ ಎಂದು ಕೆಲವರು ವಾದಿಸಿದ್ದಾರೆ. ಇದರ ಜೊತೆಗೆ, ಕೇಂದ್ರೀಯ ತನಿಖಾ ಸಂಸ್ಥೆಗಳ ದುರುಪಯೋಗವನ್ನು ಚಿತ್ರಿಸುವ ದೃಶ್ಯಗಳು ಬಿಜೆಪಿ ಬೆಂಬಲಿಗರ ಕೆಂಗಣ್ಣಿಗೆ ಗುರಿಯಾಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರವನ್ನು ಬಹಿಷ್ಕರಿಸುವ ಕರೆಗಳು ಕೇಳಿಬಂದಿವೆ.
ಆದರೆ, ಕೇರಳದಲ್ಲಿ ಎಡಪಂಥೀಯ ಮತ್ತು ಕಾಂಗ್ರೆಸ್ ಬೆಂಬಲಿಗರು ಚಿತ್ರವನ್ನು ಸಮರ್ಥಿಸಿಕೊಂಡಿದ್ದಾರೆ. “ಬಲಪಂಥೀಯ ರಾಜಕಾರಣದ ಸತ್ಯವನ್ನು ಬಯಲಿಗೆಳೆಯುವ ಧೈರ್ಯಶಾಲಿ ಪ್ರಯತ್ನ” ಎಂದು ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಮಾಮಕೂಟ್ಟತಿಲ್ ಚಿತ್ರವನ್ನು ಪ್ರಶಂಸಿಸಿದ್ದಾರೆ.
ಎಡಪಂಥೀಯ ನಾಯಕ ಬಿನೀಶ್ ಕೊಡಿಯೇರಿ ಕೂಡ ಚಿತ್ರದ ರಾಜಕೀಯ ಸಂದೇಶವನ್ನು ಮೆಚ್ಚಿದ್ದಾರೆ. ಈ ಎರಡು ಪಕ್ಷಗಳು ಚಿತ್ರವನ್ನು ಬೆಂಬಲಿಸಿದರೆ, ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಚಿತ್ರತಂಡಕ್ಕೆ ಶುಭ ಕೋರಿದ್ದು ವಿವಾದಕ್ಕೆ ಇಂಗಿತವಾಗಿದೆ.
ಮೋಹನ್‌ಲಾಲ್ ಅವರ ಅಭಿಮಾನಿಗಳಿಗೆ ಈ ಚಿತ್ರವು ದೃಶ್ಯ ಭವ್ಯತೆಯ ಸಂತಸ ತಂದಿದ್ದರೂ, ರಾಜಕೀಯ ವಿವಾದವು ಚಿತ್ರದ ಯಶಸ್ಸಿಗೆ ಅಡ್ಡ ಆಗುತ್ತದೆಯೇ ಎಂಬ ಪ್ರಶ್ನೆ ಉಳಿದಿದೆ.
ಮುಂದಿನ ದಿನಗಳಲ್ಲಿ ಈ ಚಿತ್ರವು ರಾಜಕೀಯ ಮತ್ತು ಸಾಮಾಜಿಕ ಚರ್ಚೆಗಳಿಗೆ ಇನ್ನಷ್ಟು ಆಯಾಮಗಳನ್ನು ತೆರೆಯುವ ಸಾಧ್ಯತೆ ಇದೆ.
ಚಿತ್ರದ ಆರಂಭಿಕ ದೃಶ್ಯಗಳಲ್ಲಿ ಗೋಧ್ರಾ ರೈಲು ಸುಡುವಿಕೆ ಮತ್ತು ಅದನ್ನು ಅನುಸರಿಸಿದ ಗಲಭೆಗಳನ್ನು ಚಿತ್ರಿಸಲಾಗಿದ್ದು, ಇದು ಬಿಲ್ಕಿಸ್ ಬಾನೊ ಪ್ರಕರಣದಂತಹ ಸನ್ನಿವೇಶಗಳನ್ನು ಸೂಚಿಸುತ್ತದೆ ಎಂದು ಕೆಲವರು ಆರೋಪಿಸಿದ್ದಾರೆ.
ಇದರ ಜೊತೆಗೆ, ಒಂದು ಪ್ರಮುಖ ರಾಜಕೀಯ ಪಕ್ಷವು ಹಿಂದುತ್ವ ಪಕ್ಷದೊಂದಿಗೆ ಒಂದಾಗುವುದನ್ನು ಚಿತ್ರಿಸುವ ದೃಶ್ಯಗಳು ಕೇರಳದ ಸಂಸ್ಕೃತಿಗೆ ಧಕ್ಕೆ ತರುತ್ತವೆ ಎಂಬ ಚರ್ಚೆಗೆ ದಾರಿ ಮಾಡಿಕೊಟ್ಟಿವೆ.
ಆರ್‌ಎಸ್‌ಎಸ್ ಮುಖವಾಣಿಯಾದ “ಆರ್ಗನೈಸರ್” ಚಿತ್ರವನ್ನು ತೀವ್ರವಾಗಿ ಖಂಡಿಸಿದ್ದು, ಇದು “ಹಿಂದು ವಿರೋಧಿ ಮತ್ತು ಭಾರತ ವಿರೋಧಿ ಒಂದು ದುರುದ್ದೇಶದ ಚಿತ್ರ” ಎಂದು ಬರೆದಿದೆ. ಚಿತ್ರದಲ್ಲಿ ಹಿಂದುಗಳನ್ನು ಆಕ್ರಮಣಕಾರಿಗಳಾಗಿ ಚಿತ್ರಿಸಲಾಗಿದೆ ಎಂದು ಆರೋಪಿಸಿದ್ದಾರೆ.



