ಅಲ್ ಖೈದಾ ಸಂಘಟನೆಗೆ ಸೇರಿದ ಬಾಂಗ್ಲಾದೇಶ 8 ಉಗ್ರರನ್ನು ಅಸ್ಸಾಂ ಪೊಲೀಸ್ ವಿಶೇಷ ಕಾರ್ಯಪಡೆ ಬಂಧಿಸಿದೆ.
ಆರ್ ಎಸ್ ಎಸ್ ಮತ್ತು ಹಿಂದೂ ಸಂಘಟನೆಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದ 8 ಮಂದಿಯನ್ನು ಬಂಧಿಸಲಾಗಿದೆ.
ಬಾಂಗ್ಲಾ ಪ್ರಜೆ 32 ವರ್ಷದ ಮೊಹಮದ್ ಸಡ್ ರಡಿ ಮತ್ತು ಮೊಹಮದ್ ಶಾಬ್ ಶೇಖ್ ಎಂಬುವರರು ಕಳೆದ ನವೆಂಬರ್ ನಲ್ಲಿ ಭಾರತಕ್ಕೆ ಆಗಮಿಸಿದ್ದು, ದೇಶದಲ್ಲಿನ ಸ್ಲೀಪರ್ ಸೆಲ್ ಗಳನ್ನು ಕಾರ್ಯೊನ್ಮುಖಗೊಳಿಸಿದ್ದರು.
ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಸ್ಲೀಪರ್ ಸೆಲ್ ಗಳನ್ನು ಸಕ್ರಿಯಗೊಳಿಸಿದ ನಂತರ ಇವರಿಬ್ಬರು ಕೇರಳಕ್ಕೆ ತೆರಳಲು ಸಿದ್ಧತೆ ನಡೆಸಿದ್ದರು.
ಆಪರೇಷನ್ ಪ್ರಘಾತ್ ಹೆಸರಿನಲ್ಲಿ ಕಾರ್ಯಾಚರಣೆ ಮಾಡುತ್ತಿದ್ದ ಉಗ್ರರು ಕೇರಳ ಮತ್ತು ಬಂಗಾಳದಲ್ಲಿ ಪೊಲೀಸರ ಜೊತೆ ಗುರುತಿಸಿಕೊಂಡಿದ್ದರು. ಈ ಮೂಲಕ ಗುಪ್ತಚರ ಇಲಾಖೆಯ ಮಾಹಿತಿಗಳನ್ನು ತರಿಸಿಕೊಳ್ಳುತ್ತಿದ್ದರು.
ಮೊಹಮದ್ ಫರಾಹ್ ಇಸ್ರಾಕ್ ಎಂಬಾತ ಈ ಉಗ್ರರ ಗುಂಪನ್ನು ಮುನ್ನಡೆಸುತ್ತಿದ್ದು, ಈತ ದೇಶಾದ್ಯಂತ ಗುಪ್ತಚರ ವರದಿಗಳನ್ನು ಗಮನಿಸುತ್ತಿದ್ದರು. ಈ ವರದಿಗಳ ಆಧಾರದ ಮೇಲೆ ದೇಶಾದ್ಯಂತ ಆರ್ ಎಸ್ ಎಸ್ ಮತ್ತು ಹಿಂದೂ ಸಂಘಟನೆಗಳ ಮೇಲೆ ದಾಳಿಗೆ ಸಂಚು ರೂಪಿಸುವ ಯೋಜನೆ ಹೊಂದಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.
ಕೇಂದ್ರೀಯ ಗುಪ್ತಚರ ಸಂಸ್ಥೆಗಳ ಮಾಹಿತಿ ಆಧರಿಸಿ ದಾಳಿ ಮಾಡಲಾಗಿದ್ದು, ಇದು ಯಶಸ್ಸಿನ ಮೊದಲ ಹೆಜ್ಜೆ ಮಾತ್ರ ಆಗಿದ್ದು, ಇದರ ಆಳವನ್ನು ಸಂಪೂರ್ಣವಾಗಿ ಬಯಲಿಗೆ ಎಳೆಯಲಾಗುವುದು ಎಂದು ಅಸ್ಸಾಂ ಪೊಲೀಸರು ತಿಳಿಸಿದ್ದಾರೆ.