ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಅಧಿಕೃತ ನಿವಾಸದ ಕೆಳಗೆ ಶಿವಲಿಂಗವಿದೆ ಮತ್ತು ಅದನ್ನು ಉತ್ಖನನ ಮಾಡಬೇಕು ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಭಾನುವಾರ ಹೇಳಿದ್ದಾರೆ.
ಲಕ್ನೋದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಾದವ್, ಲಕ್ನೋದ ಮುಖ್ಯಮಂತ್ರಿ ನಿವಾಸದ ಕೆಳಗೆ ಶಿವಲಿಂಗವಿದೆ. ಅದನ್ನು ಸಹ ಉತ್ಖನನ ಮಾಡಬೇಕು ಎಂದು ಆಗ್ರಹ ಮಾಡಿದರು.
ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಪುರಾತತ್ವ ಸ್ಥಳಗಳ ಸಮೀಕ್ಷೆಗಳಿಂದ ಉಂಟಾಗಿರುವ ರಾಜಕೀಯ ಉದ್ವಿಗ್ನತೆಯ ಮಧ್ಯೆ ಅಖಿಲೇಶ್ ಅವರ ಈ ಹೇಳಿಕೆ ಬಂದಿದೆ.
ಕಳೆದ ವಾರ, ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ನಡೆಸಿದ ಸಮೀಕ್ಷೆಯ ಸಮಯದಲ್ಲಿ 1857ರ ಸಿಪಾಯಿ ದಂಗೆಯ ಕಾಲಕ್ಕೆ ಸೇರಿದ 250 ಅಡಿ ಆಳದ ಮೆಟ್ಟಿಲು ಬಾವಿ ಪತ್ತೆಯಾಗಿತ್ತು.
ನಿರುದ್ಯೋಗ ಮತ್ತು ಕೃಷಿ ಬಿಕ್ಕಟ್ಟು ಸೇರಿದಂತೆ ಪ್ರಮುಖ ಸಮಸ್ಯೆಗಳಿಂದ ಸಾರ್ವಜನಿಕರ ಗಮನವನ್ನು ಬೇರೆಡೆಗೆ ಸೆಳೆಯಲು ಬಿಜೆಪಿ ಇಂತಹ ಸಮೀಕ್ಷೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ಯಾದವ್ ಪದೇ ಪದೇ ಆರೋಪಿಸಿದ್ದಾರೆ.
ಎಲ್ಲೆಡೆ ಅಗೆಯುವುದರಿಂದ ನಮಗೆ ಯಾವುದೇ ಪರಿಹಾರ ಸಿಗುವುದಿಲ್ಲ. ನಮ್ಮ ದೇಶದಲ್ಲಿ ಪೂಜಾ ಸ್ಥಳಗಳ ಕಾಯ್ದೆ ಇದೆ, ಅದು ಅಂತಹ ವಿಷಯಗಳನ್ನು ನಿಷೇಧಿಸುತ್ತದೆ ಎಂದು ಅವರು ಕಳೆದ ವಾರ ಹೇಳಿದ್ದರು.