ಆರ್ಥಿಕ ಸುಧಾರಣೆಗಳ ಮೂಲಕ ದೇಶದ ಆರ್ಥಿಕತೆಗೆ ಹೊಸ ಭಾಷ್ಯ ಬರೆದ ಎರಡು ಬಾರಿಯ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು.
ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಮನಮೋಹನ್ ಸಿಂಗ್ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ಬುಧವಾರ ಸಂಜೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಸ್ಪತ್ರೆಗೆ ದಾಖಲಿಸಿದ ಕೆಲವೇ ಸಮಯದಲ್ಲಿ ಇಹಲೋಕ ತ್ಯಜಿಸಿದ್ದಾರೆ.
ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಎಂದೇ ಹೆಸರಾಗಿದ್ದ ಮನಮೋಹನ್ ಸಿಂಗ್, ಮಾತಿಗಿಂತ ಕೃತಿ ಲೇಸು ಎಂಬಂತೆ ಪಾತಾಳಕ್ಕೆ ಇಳಿದಿದ್ದ ದೇಶದ ಆರ್ಥಿಕತೆಯನ್ನು ಮೇಲೆತ್ತುವ ಮೂಲಕ ಅಭಿವೃದ್ಧಿಶೀಲ ರಾಷ್ಟ್ರಗಳ ಜೊತೆ ಪೈಪೋಟಿ ನಡೆಸುವಂತೆ ದೇಶವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಪಿವಿ ನರಸಿಂಹರಾವ್ ಕಾಲದಲ್ಲಿ ಕೇಂದ್ರ ಹಣಕಾಸು ಸಚಿವರಾಗಿದ್ದ ಮನಮೋಹನ್ ಸಿಂಗ್ ಯುಪಿಎ ಆಡಳಿತದಲ್ಲಿ ಎರಡು ಬಾರಿ ಪ್ರಧಾನಿ ಆಗಿ ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು. ಅವರ ಕಾಲದಲ್ಲಿ ಜಾರಿಗೆ ಬಂದ ಆರ್ಥಿಕ ಉದಾರೀಕರಣ, ಖಾಸಗೀಕರಣ, ತೆರಿಗೆ ಪದ್ಧತಿಗಳು, ಆಹಾರ ಭದ್ರತಾ ಕಾಯ್ದೆಗಳು ಕ್ರಾಂತಿಕಾರಕ ಬದಲಾವಣೆಗೆ ಕಾರಣವಾದವು.
ಪ್ರತಿಪಕ್ಷಗಳಿಂದ ಮನಮೋಹನ್ ಸಿಂಗ್ ಅಲ್ಲ, ಮೌನಿಮೋಹನ್ ಸಿಂಗ್ ಎಂದು ಟೀಕೆಗೆ ಗುರಿಯಾದರೂ ಶಾಯರಿಗಳ ಮೂಲಕ ದಿಟ್ಟ ಉತ್ತರ ನೀಡುತ್ತಿದ್ದರು. ಅಲ್ಲದೇ ರಾಜಕಾರಣಿಗಳಂತೆ ಆರೋಪ-ಪ್ರತ್ಯಾರೋಪ ಮಾಡುತ್ತಾ ಸಮಯ ಕಳೆಯದೇ ದೇಶಕ್ಕೆ ಆರ್ಥಿಕತೆಯ ಹೊಸ ರೂಪ ನೀಡುವತ್ತ ಗಮನಹರಿಸಿದರು.