ಸತತ ಎರಡು ಬಾರಿ ಪ್ರಧಾನಿ ಹುದ್ದೆ ಅಲಂಕರಿಸಿದ್ದ ಮನಮೋಹನ್ ಸಿಂಗ್ 2009ರಲ್ಲಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅತ್ಯಂತ ಸುದೀರ್ಘ ಶಸ್ತ್ರಚಿಕಿತ್ಸೆ ನಂತರ ಅವರು ಕೇಳಿದ ಮೊದಲ ಪ್ರಶ್ನೆಗೆ ವೈದ್ಯರು ತಬ್ಬಿಬ್ಬಾಗಿದ್ದರು.
ಹೌದು, ೨೦೦೯ರಲ್ಲಿ ಮನಮೋಹನ್ ಸಿಂಗ್ ಹೃದಯದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರಚಿಕಿತ್ಸೆ ಮುಗಿದ ನಂತರ ಅವರ ಬಳಿ ತೆರಳಿ ವೈದ್ಯರು ಮಾತನಾಡಿಸಲು ಯತ್ನಿಸಿದಾಗ ಮನಮೋಹನ್ ಸಿಂಗ್ ತಮ್ಮ ಆರೋಗ್ಯದ ಬಗ್ಗೆ ವಿಚಾರಿಸದೇ ದೇಶದ ಬಗ್ಗೆ ವಿಚಾರಿಸುವ ಮೂಲಕ ಅಪ್ಪಟ್ಟ ದೇಶಪ್ರೇಮ ಮೆರೆದಿದ್ದರು.
ಪಾತಾಳ ಕಂಡಿದ್ದ ದೇಶದ ಆರ್ಥಿಕತೆಗೆ ಸಂಜೀವಿನಿ ನೀಡುವ ಮೂಲಕ ಜಗತ್ತಿನ ಬಲಾಢ್ಯ ದೇಶಗಳ ಜೊತೆ ಸ್ಪರ್ಧೆ ನಡೆಸಲು ಭಾರತವನ್ನು ಸಮರ್ಥವಾಗಿ ಕಟ್ಟಿದ ಮನಮೋಹನ್ ಸಿಂಗ್ ಸದಾ ದೇಶದ ಪ್ರಗತಿ ಬಗ್ಗೆ ಯೋಚಿಸುತ್ತಿದ್ದರು ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ.
ಹಿರಿಯ ಕಾರ್ಡಿಯಕ್ ಸರ್ಜನ್ ಡಾ.ರಮಾಕಾಂತ್ ಪಾಂಡ 2009ರಲ್ಲಿ ಮನಮೋಹನ್ ಸಿಂಗ್ ಅವರಿಗೆ ಹೃದಯದ ಶಸ್ತ್ರಚಿಕಿತ್ಸೆ ನಡೆಸಿದ್ದರು. ಸುಮಾರು 10ರಿಂದ 11 ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆ ನಂತರ ಉಸಿರಾಟ ಎಲ್ಲಾ ಸಹಜ ಸ್ಥಿತಿಗೆ ಬಂದಾಗ ಅವರನ್ನು ವಿಚಾರಿಸಿದ್ದಾರೆ.
ಶಸ್ತ್ರಚಿಕಿತ್ಸೆ ನಂತರ ಕಣ್ಣು ಬಿಟ್ಟ ಮನಮೋಹನ್ ಸಿಂಗ್ ವೈದ್ಯರ ಬಳಿ ನನ್ನ ದೇಶ ಹೇಗಿದೆ? ಕಾಶ್ಮೀರ ಪರಿಸ್ಥಿತಿ ಹೇಗಿದೆ ಎಂದು ವೈದ್ಯರ ಬಳಿ ಮೊದಲ ಪ್ರಶ್ನೆ ಕೇಳಿದರು. ಇದರಿಂದ ಅವಕ್ಕಾದ ವೈದ್ಯರು ನೀವು ನಿಮ್ಮ ಆರೋಗ್ಯದ ಬಗ್ಗೆ ಶಸ್ತ್ರಚಿಕಿತ್ಸೆ ಹೇಗೆ ಆಯಿತು ಎಂದು ಕೇಳುತ್ತೀರಿ ಎಂದು ಭಾವಿಸಿದ್ದೆ ಎಂದು ಉತ್ತರಿಸಿದರು.
ಅದಕ್ಕೆ ಮನಮೋಹನ್ ಸಿಂಗ್, ನಿಮ್ಮ ಮೇಲೆ ನನಗೆ ಭರವಸೆ ಇದೆ. ನೀವು ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಮಾಡಿರುತ್ತೀರಿ ಎಂದು. ನನಗೆ ನನ್ನ ಆರೋಗ್ಯದ ಬಗ್ಗೆ ಕಳವಳ ಇಲ್ಲ. ದೇಶದ ಬಗ್ಗೆ ಯೋಚನೆ ಇದೆ ಎಂದು ಉತ್ತರಿಸಿದ್ದನ್ನು ವೈದ್ಯ ರಮಾಕಾಂತ್ ಪಾಂಡ ವಿವರಿಸಿದರು.
ಮನಮೋಹನ್ ಸಿಂಗ್ ಒಬ್ಬ ಸಜ್ಜನ. ದೇಶಪ್ರೇಮಿ ಮತ್ತು ಮಾನವೀಯ ಮೌಲ್ಯಗಳನ್ನು ಒಳಗೊಂಡವರು. ವೈದ್ಯನಿಗೆ ಆದರ್ಶ ಎನ್ನುವಂತಹ ರೋಗಿ ಎಂದು ರಮಾಕಾಂತ್ ಹೇಳಿದರು.
ಮನಮೋಹನ್ ಸಿಂಗ್ ಯಾವತ್ತೂ ಕೂಡ ದೂರು ಹೇಳಲಿಲ್ಲ. ಇದು ಅವರ ಬಲಿಷ್ಠ ವ್ಯಕ್ತಿತ್ವವನ್ನು ತೋರಿಸುತ್ತದೆ. ಪ್ರತಿ ಬಾರಿಯೂ ಚೆಕಪ್ ಗೆ ಆಸ್ಪತ್ರೆಗೆ ಬರುತ್ತಿದ್ದಾಗ ನಾವು ಗೇಟ್ ಬಳಿ ಹೋಗಿ ಕರೆದುಕೊಂಡು ಬರುತ್ತಿದ್ದೆವು. ಆದರೆ ಅವರು ನನಗಾಗಿ ಸಮಯ ವ್ಯರ್ಥ ಮಾಡಬೇಡಿ. ಗೇಟ್ ಬಳಿ ಬರಬೇಡಿ ಎಂದು ಹೇಳುತ್ತಿದ್ದರು ಎಂದು ಅವರು ವಿವರಿಸಿದರು.
ಆರ್ಥಿಕ ಉದಾರೀಕರಣ, ಖಾಸಗೀಕರಣ, ಆಹಾರ ಭದ್ರತೆ ಕಾಯ್ದೆ, ತೆರಿಗೆ ಪದ್ಧತಿಯಲ್ಲಿ ಬದಲಾವಣೆ, ಜಿಎಎಸ್ ಟಿ ಜಾರಿಗೆ ರೂಪುರೇಷೆ… ಹೀಗೆ ಹತ್ತು ಹಲವು ನಿಯಮಗಳನ್ನು ಜಾರಿಗೆ ತರುವ ಮೂಲಕ ಮನಮೋಹನ್ ಸಿಂಗ್ ದೇಶದ ಆರ್ಥಿಕತೆ ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡಿದ್ದಾರೆ.
ರಾಜ್ಯಸಭಾ ಸದಸ್ಯರಾಗಿರುವ ಮನಮೋಹನ್ ಸಿಂಗ್ ಅವರ ಆರೋಗ್ಯದಲ್ಲಿ ಇತ್ತೀಚೆಗೆ ಏರುಪೇರು ಉಂಟಾಗಿದ್ದು, ಗುರುವಾರ ರಾತ್ರಿ ನಿಧನರಾದರು. ಅವರಿಗೆ ೯೨ ವರ್ಷ ವಯಸ್ಸಾಗಿತ್ತು. ನಾಳೆ ಎಐಸಿಸಿ ಕಚೇರಿಯಲ್ಲಿ ಪಾರ್ಥಿವ ಶರೀರ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಆಗಲಿದ್ದು, ಅಮೆರಿಕದಿಂದ ಪುತ್ರಿ ಆಗಮಿಸಿದ ನಂತರ ಅಂತ್ಯ ಸಂಸ್ಕಾರದ ವಿಧಿವಿಧಾನಗಳು ಆರಂಭವಾಗಲಿವೆ.